ಮೇ 25ರವರೆಗೆ ಲಾಕ್‌ಡೌನ್ ಸಡಿಲಿಕೆ ಮಾಡದಂತೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದಿಂದ ಜಿಲ್ಲಾಧಿಕಾರಿಗೆ ಮನವಿ
'ಬಟ್ಟೆ ಅಂಗಡಿಗಳು ತೆರೆಯುವುದು ಬೇಡ'

ಉಡುಪಿ, ಮೇ 4: ಮೂರನೆ ಹಂತದ ಲಾಕ್‌ಡೌನ್ ಮುಗಿಯುವ ಮೇ 17ರ ಬಳಿಕ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡಿದರೆ ರಮಝಾನ್‌ನ ಕೊನೆಯ ವಾರ ಹಾಗು ಈದ್ ನೆಪದಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಖರೀದಿಗಾಗಿ ಬೀದಿಗಿಳಿಯುವ ಸಾಧ್ಯತೆ ಬಹಳ ಹೆಚ್ಚಿದೆ. ಆದುದರಿಂದ ರಮಝಾನ್ ತಿಂಗಳು ಮತ್ತು ಈದ್ ಮುಗಿಯುವ ಮೇ 25ರವರೆಗೂ ಈಗಿರುವ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಯಾವುದೇ ವಾಣಿಜ್ಯ, ಅಂಗಡಿ ಮುಂಗಟ್ಟು ಗಳನ್ನು ತೆರೆಯಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟವು ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಆರಾಧನೆ ಮತ್ತು ಉಪವಾಸ ಆಚರಣೆಯೇ ಪ್ರಮುಖವಾಗಿರುವ ಪವಿತ್ರ ರಮಝಾನ್ ತಿಂಗಳಲ್ಲಿ ಲಾಕ್‌ಡೌನ್‌ನಿಂದಾಗಿ ಎಲ್ಲಾ ಆರಾಧನಾಲಯ ಗಳು ಅನಿರ್ದಿಷ್ಠಾವಧಿಗಾಗಿ ಮುಚ್ಚಿವೆ. ಆದುದರಿಂದ ರಮಝಾನ್ ತಿಂಗಳಲ್ಲಿ ಸಾಮಾನ್ಯವಾಗಿ ಮಸೀದಿಯಲ್ಲಿಯೇ ನಿರ್ವಹಿಸುವ ಪ್ರಮುಖ ಮತ್ತು ಎಲ್ಲಾ ಆರಾಧನಾ ಕರ್ಮಗಳು ಮನೆಯಲ್ಲಿಯೇ ನಡೆಯುತ್ತಿವೆ.
ಸಹಜವಾಗಿ ರಮಝಾನ್ ತಿಂಗಳಿಗಾಗಿ ಖರೀದಿ ಮುಂತಾದ ವಾಣಿಜ್ಯ ಚಟುವಟಿಕೆಗಳೂ ನಡೆಯುತ್ತಿಲ್ಲ. ಆದುದರಿಂದ ಇಂತಹ ಪ್ರತಿಕೂಲ ಸಮಯ ದಲ್ಲಿ ಖರೀದಿಗಳ ಕಡೆ ಹೋಗದೆ ದಾನಧರ್ಮಗಳ ಮೂಲಕ ರಮಝಾನ್ ಆಚರಿಸುವುದು ಉತ್ತಮವೆಂದು ಸಮುದಾಯದ ಎಲ್ಲಾ ಧಾರ್ಮಿಕ ಪಂಡಿತರ, ಮುಖಂಡರ ಮತ್ತು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.
ಹಸಿರು ವಲಯ ಆಗಿರುವ ಉಡುಪಿ ಜಿಲ್ಲೆಯಲ್ಲಿ ಮೇ 17ರ ಬಳಿಕ ಲಾಕ್ ಡೌನ್ ಸಡಿಲಿಸಿ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡಿದರೆ ಜನರು ದೊಡ್ಡ ಸಂಖ್ಯೆಯಲ್ಲಿ ಖರೀದಿಗಾಗಿ ಬೀದಿಗಿಳಿಯಲಿದ್ದಾರೆ. ಇದರಿಂದ ಇಷ್ಟು ದೀರ್ಘ ಸಮಯ ಲಾಕ್‌ಡೌನ್ ಅವಧಿಯಲ್ಲಿ ಎಲ್ಲಾ ತ್ಯಾಗಗಳನ್ನು ಮಾಡಿ ಕಾಪಾಡಿಕೊಂಡಿದ್ದ ಸುರಕ್ಷಿತ ಅಂತರ ಇಲ್ಲವಾಗಿ ಸೊಂಕು ಹರಡುವ ಅಪಾಯವಿದೆ. ಜಿಲ್ಲಾಡಳಿತ ಇಷ್ಟರವರೆಗೆ ಸೋಂಕಿನಿಂದ ರಕ್ಷಿಸಲು ಮಾಡಿದ ಪ್ರಯತ್ನಕ್ಕೆ ಇದರಿಂದ ಹಿನ್ನಡೆಯಾಗುವ ಸಾಧ್ಯತೆ ಇದೆ. ಜೊತೆಗೆ ವದಂತಿ ಹರಡುವ ಮತ್ತು ಸಮಾಜದ ಶಾಂತಿ ಕದಡುವ ಪರಿಸ್ಥಿತಿಯೂ ನಿರ್ಮಾಣವಾಗುವ ಅಪಾಯ ವಿದೆ ಎಂದು ಒಕ್ಕೂಟ ತಿಳಿಸಿದೆ.
ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಎಂ. ಯಾಸೀನ್ ಮಲ್ಪೆ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ, ವಕ್ತಾರ ಸಲಾವುದ್ದೀನ್ ಅಬ್ದುಲ್ಲಾಹ್ ಉಪಸ್ಥಿತರಿದ್ದರು.







