ಆದಾಯದ ಮೂಲವಾಗಿರುವ ಮದ್ಯವನ್ನು ನಿಷೇಧಿಸಲು ಆಗಲ್ಲ: ಬಿ.ಸಿ. ಪಾಟೀಲ್

ಉಡುಪಿ, ಮೇ 4: ರಾಜ್ಯದಲ್ಲಿ ಕರೋನದಿಂದ ಮೃತಪಟ್ಟವರಿಗಿಂತ ಹೆಚ್ಚು ಮಂದಿ ಮದ್ಯ ಸಿಗದೆ ಮೃತಪಟ್ಟಿದ್ದಾರೆ. ಹಾಗಂತ ನಾವು ಮದ್ಯಪಾನವನ್ನು ಪ್ರೋತ್ಸಾಹ ಮಾಡುತ್ತಿಲ್ಲ. ಅಬಕಾರಿ ಇಲಾಖೆಯಿಂದ ಸರಕಾರಕ್ಕೆ ಮೂಲ ಆದಾಯವೂ ಇದೆ. ಮದ್ಯಪಾನಕ್ಕೆ ಅವಕಾಶ ನೀಡದೆ ಏನು ಮಾಡಲು ಆಗುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಕುಡುಕರು ಆರಡಿ ಅಲ್ಲ 12 ಅಡಿ ದೂರ ನಿಂತು ಮದ್ಯ ಖರೀದಿ ಸಲು ಕೂಡ ಸಿದ್ಧರಿದ್ದಾರೆ. ಮದ್ಯಪಾನ ಈ ಕಾಲದ ಪಿಡುಗು ಅಲ್ಲ. ದೇವಾನುದೇವತೆಗಳ ಕಾಲದಿಂದಲೂ ಮದ್ಯ ಸೇವನೆ ಮಾಡಲಾಗುತ್ತಿತ್ತು. ಮದ್ಯಪಾನ ಮತ್ತೆ ಆರಂಭಿಸಿರುವುದಕ್ಕೆ ಅಷ್ಟೊಂದು ಪ್ರಾಮುಖ್ಯತೆ ನೀಡಬೇಕಾಗಿಲ್ಲ ಎಂದರು.
ಚಿತ್ರೋದ್ಯಮ ಆರಂಭಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಿತ್ರೋದ್ಯಮದಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಕಷ್ಟ ಆಗುತ್ತದೆ.ಈ ಬಗ್ಗೆ ಸವಿಸ್ತಾರವಾದ ಚರ್ಚೆ ಆಗಬೇಕಾಗಿದೆ. ಮುಂದಿನ ಹಂತದ ಲಾಕ್ಡೌನ್ ಸಡಿಲಿಕೆಯ ಬಳಿಕ ಚಿತ್ರೋದ್ಯಮಕ್ಕೂ ಅವಕಾಶ ನೀಡಬಹುದು ಎಂದು ಅಭಿಪ್ರಾಯಪಟ್ಟರು.
ಕೊರೋನ ಬಂದ ನಂತರ ಯಾರು ಕೃಷಿಭೂಮಿ ಖಾಲಿ ಬಿಡುತ್ತಿಲ್ಲ. ಬೆಂಗಳೂರು, ಮುಂಬೈಗೆ ವಲಸೆ ಹೋದವರು ಕೂಡ ಊರಿಗೆ ವಾಪಸ್ಸು ಬಂದು ಕೃಷಿ ಬಗ್ಗೆ ಒಲವು ತೋರಿಸುತ್ತಿದ್ದಾರೆ. ಕೃಷಿ ಅಂದರೆ ಏನು ಅಂತ ಕೊರೋನ ಬಂದ ನಂತರ ಜನರಿಗೆ ಅರ್ಥವಾಗಿದೆ. ಲಾಭದಾಯಕ ಕೃಷಿ ಮಾಡಬೇಕು ಎಂಬ ಮನೋಭಾವನೆ ಜನರಲ್ಲಿ ಬಂದಿದೆ ಎಂದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕೃಷಿ ಮಾಡದೆ ಇರುವ ಭೂಮಿಗೆ ಅನುದಾನ ನೀಡಬೇಕಾಗಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಅವರು ತಿಳಿಸಿದರು.







