ಸಂಪ್ಯ: ಸೀಲ್ ಡೌನ್ ನಿರ್ಬಂಧ ತೆರವು

ಪುತ್ತೂರು, ಮೇ 4: ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯದಲ್ಲಿ ವಿದೇಶದಿಂದ ಬಂದ ಯುವಕನೋರ್ವನಿಗೆ ಕೊರೋನ ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಹೇರಲಾಗಿದ್ದ ಸೀಲ್ ಡೌನ್ ನಿರ್ಬಂಧವನ್ನು ಸೋಮವಾರ ತೆರವುಗೊಳಿಸಲಾಗಿದೆ.
ಗ್ರಾಮದಲ್ಲಿ ಸೋಂಕು ದೃಢಪಟ್ಟ ವ್ಯಕ್ತಿಯ ಮನೆ ವ್ಯಾಪ್ತಿಯಿಂದ 1 ಕಿ. ಮೀ. ದೂರವನ್ನು ತೀವ್ರ ಬಫರ್ ಝೋನ್ ಎಂದು ಗುರುತಿಸಲಾಗಿ, ಮನೆಯಿಂದ 100 ಮೀ. ದೂರವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿತ್ತು. ಸಂಪ್ಯ ಭಾಗದ 91 ಮಂದಿಯ 23 ಮನೆಗಳು ಈ ಸೀಲ್‍ಡೌನ್ ವ್ಯಾಪ್ತಿಗೆ ಒಳಪಟ್ಟಿದ್ದವು.
100 ಮೀ. ವ್ಯಾಪ್ತಿಯಲ್ಲಿ ಯಾರೂ ಹೊರ ಹೋಗುವುದನ್ನು ಮತ್ತು ಬರುವುದನ್ನು ನಿರ್ಬಂ„ಸಲಾಗಿದೆ. ಈ ನಿಯಂತ್ರಿತ ಪ್ರದೇಶದ ಜನತೆಗೆ ಅಗತ್ಯವಾದ ಮೂಲಭೂತ ಅವಶ್ಯಕತೆ ಹಾಗೂ ದಿನಸಿ ಮತ್ತಿತರ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಕೊರೋನ ಸೋಂಕು ದೃಢಪಟ್ಟ 28 ದಿನಗಳು ಕಳೆದಿರುವುದರಿಂದ ಮತ್ತು ಸೋಂಕಿತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರ ಕ್ವಾರಂಟೈನ್ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಈ ಭಾಗದ ಸೀಲ್ ಲಾಕ್ ನಿಯಮವನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







