ಅಪೌಷ್ಟಿಕತೆ ನಿವಾರಣೆಗೆ ಸಮಗ್ರ ಯೋಜನೆ ರೂಪಿಸಲು ಎಎಪಿ ಆಗ್ರಹ
ಬೆಂಗಳೂರು, ಮೇ 4: ಮಕ್ಕಳ ಸಾವಿಗೆ ಕಾರಣರಾಗಿರುವ ಸಚಿವರನ್ನು, ಅಧಿಕಾರಿಗಳನ್ನು ಮನೆಗೆ ಕಳುಹಿಸಬೇಕು, ಅಪೌಷ್ಟಿಕತೆ ನಿವಾರಣೆಗೆ ಸಮಗ್ರ ಯೋಜನೆ ರೂಪಿಸಬೇಕು ಎಂದು ಆಮ್‍ಆದ್ಮಿ ಪಕ್ಷ ಆಗ್ರಹಿಸಿದೆ.
2019 ರ ಎಪ್ರಿಲ್ ತಿಂಗಳಿನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ವರದಿಯ ಪ್ರಕಾರ ಕರ್ನಾಟಕದ ಸಣ್ಣ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚು ಎನ್ನುವ ಅಂಶವನ್ನು ಪ್ರಮುಖವಾಗಿ ಉಲ್ಲೇಖ ಮಾಡಿತ್ತು.
ಅದರಲ್ಲೂ ಬೆಳಗಾವಿ, ಬಳ್ಳಾರಿ, ಕಲಬುರ್ಗಿ, ಬೆಂಗಳೂರು ನಗರ, ಗ್ರಾಮಾಂತರ, ಚಿತ್ರದುರ್ಗ, ರಾಯಚೂರು, ಬೀದರ್, ತುಮಕೂರು ಹೀಗೆ ಕರ್ನಾಟಕದ ಒಂದಷ್ಟು ಜಿಲ್ಲೆಗಳ ಸಣ್ಣ ಮಕ್ಕಳಿಗೆ ಅಗತ್ಯ ಪೌಷ್ಟಿಕಾಂಶವುಳ್ಳ ಆಹಾರ ದೊರೆಯುತ್ತಿಲ್ಲ ಎಂದು ಸಮೀಕ್ಷೆಯ ವರದಿ ಹೇಳಿತ್ತು.
ಹೀಗಿದ್ದರೂ ಸಹ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯೊಂದರಲ್ಲೆ ಸುಮಾರು 65 ಕ್ಕೂ ಹೆಚ್ಚು ಹಸುಗೂಸುಗಳು ಸಾವನ್ನಪ್ಪಿರುವುದು ನೋಡಿದರೆ ಯಾರು ಕ್ರೂರಿಗಳು ಎಂದು ತಿಳಿಯುತ್ತದೆ.
ರಾಯಚೂರು ಜಿಲ್ಲೆಯೊಂದರಲ್ಲೇ 2017 ಮತ್ತು 18 ರಲ್ಲಿ ಕ್ರಮವಾಗಿ 173, 411 ಮಕ್ಕಳು ಸಾವನ್ನಪ್ಪಿದರು ಇಷ್ಟೆಲ್ಲಾ ಸಂಗತಿಗಳು ತಿಳಿದಿದ್ದರೂ ಸಹ ಅಧಿಕಾರಿಗಳು ಯಾವ ಕೆಲಸದಲ್ಲಿ ತೊಡಗಿದ್ದರು. ರಾಜ್ಯದಲ್ಲಿ ಕೊರೋನ ಸೋಂಕಿಗೆ ಸತ್ತವರಿಗಿಂತ ಹೆಚ್ಚಾಗಿ ಅಪೌಷ್ಟಿಕತೆಗೆ ಮರಣ ಹೊಂದಿರುವುದು ನೋಡಿದರೆ ಕೊರೋನಾಗಿಂತಲೂ ಮನುಷ್ಯನೇ ಹೆಚ್ಚು ಕ್ರೂರಿ ಎನ್ನಬಹುದು.
ತಮ್ಮ ಜಿಲ್ಲೆಗಳ ವಾಸ್ತಾವಾಂಶದ ಅರಿವಿದ್ದ ಅಧಿಕಾರಿಗಳು ಹಸುಗೂಸುಗಳ ಪ್ರಾಣ ಉಳಿಸಲು ನಯಾಪೈಸೆಯಷ್ಟು ಶ್ರಮ ಪಡದೆ ಇರುವುದು ಈ ಘಟನೆಯಿಂದ ತಿಳಿಯುತ್ತದೆ. ಈ ಸ್ಥಿತಿಗೆ ಕಾರಣರಾದ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡಬೇಕು. ಕೊರೋನ ಸಮಯದಲ್ಲಿ ಹೊರಗಡೆ ಎಲ್ಲೂ ಕಾಣದ ಸಚಿವೆ ಶಶಿಕಲಾ ಜೊಲ್ಲೆಯವರು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಕೆಲಸ ಮಾಡಲು ಹೇಳದೆ ತಾವೇ ಕಾಣೆಯಾಗಿದ್ದು ಕುಚೋದ್ಯವೇ ಸರಿ.
ಆದ ಕಾರಣ ಸಚಿವರನ್ನು ನೇರ ಹೊಣೆ ಮಾಡಿ ಯಡಿಯೂರಪ್ಪನವರು ರಾಜೀನಾಮೆ ಪಡೆಯಬೇಕು. ಕೇವಲ ಆಶಾ ಕಾರ್ಯಕರ್ತರನ್ನು ಮಾತ್ರ ಬೀದಿ ಬೀದಿಯಲ್ಲಿ ಅಲೆಸಿ ಅಧಿಕಾರಿಗಳು ತಣ್ಣಗೆ ಮನೆಯಲ್ಲಿ ಸಂಸಾರದೊಟ್ಟಿಗೆ ಕುಳಿತು ಮಕ್ಕಳ ಸಾವಿಗೆ ಕಾರಣರಾಗಿದ್ದಾರೆ ಅಂತಹ ಅಧಿಕಾರಿಗಳ ಸೇವಾ ವರದಿಯಲ್ಲಿ ಈ ಘಟನೆಯನ್ನು ಕಪ್ಪು ಚುಕ್ಕೆ ಎಂದು ನಮೂದಿಸಬೇಕು, ಒಂದಷ್ಟು ಸೌಲಭ್ಯಗಳಿಗೆ ಕತ್ತರಿ ಹಾಕಬೇಕು ಎಂದು ಆಗ್ರಹಿಸಿದೆ.
ಜವಾಬ್ದಾರಿಯಿಂದ ನುಣುಚಿಕೊಳ್ಳದಂತೆ ಖುದ್ದು ಅಧಿಕಾರಿಗಳೆ ನೇರವಾಗಿ ಕೆಲಸ ಮಾಡುವಂತೆ ಸರಕಾರ ಸೂಚಿಸಬೇಕು. ತಮ್ಮ ಜೀವಗಳನ್ನು ಪಣಕಿಟ್ಟು ಕೊರೋನ ವಿರುದ್ದ ಹೋರಾಡಿದ ಆಶಾ ಕಾರ್ಯಕರ್ತೆಯರನ್ನು ಈ ವಿಚಾರದಲ್ಲಿ ಹೊಣೆಗಾರರನ್ನಾಗಿ ಮಾಡಬಾರದು. ತಕ್ಷಣವೇ ಸರಕಾರ ಅಗತ್ಯ ವಸ್ತುಗಳ ಪೂರೈಕೆಗೆ ತಂಡ ರಚಿಸಿ ವಿತರಣೆ ಮಾಡಬೇಕು. ಆಹಾರ ರಾಜಕಾರಣಕ್ಕೆ ಅವಕಾಶ ನೀಡದೆ ಮೊಟ್ಟೆ, ಮಾಂಸವನ್ನು ಉಚಿತವಾಗಿ ನೀಡಬೇಕು. ಹಸಿ ಸೊಪ್ಪು, ಕಾಳುಗಳನ್ನು ರೈತರಿಂದ ನೇರವಾಗಿ ಖರೀದಿಸಿ ಅಪೌಷ್ಟಿಕತೆ ಮಕ್ಕಳು ಇರುವ ಮನೆಗಳಿಗೆ ನೇರವಾಗಿ ನೀಡಬೇಕು ಎಂದು ಆಗ್ರಹಿಸಿದೆ.
ಪೌಷ್ಟಿಕಾಂಶ ಸಮೀಕ್ಷಾ ವರದಿಯಲ್ಲಿ ಉಲ್ಲೇಖ ಮಾಡಿರುವ ಅಂಶಗಳನ್ನು ಗಮನಿಸಿ ಅದರ ಅನ್ವಯ ಕೂಡಲೇ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು. ಎರಡು ವರ್ಷದೊಳಗಿನ ಹತ್ತರಲ್ಲಿ ಒಂದು ಮಗುವಿಗೆ ಮಾತ್ರ ದ್ವಿದಳ ಧಾನ್ಯಗಳು ಸಿಗುತ್ತಿವೆ. ಹತ್ತು ಜನರಲ್ಲಿ ಎರಡು ಮಕ್ಕಳಿಗೆ ಮಾತ್ರ ಮೊಟ್ಟೆ, ಮಾಂಸ ದೊರೆಯುತ್ತಿದೆ. 2-4 ವರ್ಷದ ಒಳಗಿನ ಮಕ್ಕಳಿಗೆ ಧಾನ್ಯ, ಗೆಡ್ಡೆ-ಗೆಣಸುಗಳು ಸಿಗುತ್ತಿವೆ. ಆದರೆ, ಹಾಲು, ಮೊಸರು ಮತ್ತು ಹಾಲಿನ ಇತರ ಉತ್ಪನ್ನಗಳು ಸಿಗುವುದು ಶೇ 50ರಷ್ಟು ಮಕ್ಕಳಿಗೆ ಮಾತ್ರ. ಬೆರಳೆಣಿಕೆಯ ಮಕ್ಕಳಿಗೆ ಮಾತ್ರ ಮಾಂಸ ಮತ್ತು ಮೊಟ್ಟೆ ಸಿಗುತ್ತಿದೆ. ಎಲ್ಲರಿಗೂ ಇದು ಸಿಗುವಂತೆ ಮಾಡಬೇಕು ಎಂದು ಎಎಪಿ ಒತ್ತಾಯಿಸಿದೆ.







