ಸೀಲ್ ಡೌನ್ ನಿಂದ ತುಂಬೆ ಗ್ರಾಮ ಮುಕ್ತ : ದ.ಕ. ಜಿಲ್ಲಾಧಿಕಾರಿ
ಬಂಟ್ವಾಳ : ವ್ಯಕ್ತಿಯೊಬ್ಬರಿಗೆ ಕೊರೋನ ಪಾಸಿಟಿವ್ ಆದ ಬಳಿಕ ಸೀಲ್ ಡೌನ್ ಆಗಿದ್ದ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಕೆಲವು ಪ್ರದೇಶಗಳನ್ನು ಸೋಮವಾರ ಸೀಲ್ ಡೌನ್ ನಿಂದ ಮುಕ್ತಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಎ.4ರಂದು ತುಂಬೆಯ ವ್ಯಕ್ತಿಯೊಬ್ಬರಲ್ಲಿ ಕೊರೋನ ಸೋಂಕು ಪತ್ತೆಯಾದ ಬಳಿಕ ತುಂಬೆ ಜಂಕ್ಷನ್ ನಿಂದ ನೇತ್ರಾವತಿ ನದಿಕಿನಾರೆಯ ವರೆಗೆ ಹಾಗೂ ವ್ಯಕ್ತಿಯ ಮನೆ ಇರುವ ಬಗ್ದಾದ್ ಎಂಬ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿತ್ತು. ಈ ಪ್ರದೇಶಗಳಲ್ಲಿ 28 ದಿನಗಳಲ್ಲಿ ಯಾವುದೇ ಹೊಸ ಸೋಂಕು ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಸೀಲ್ ಡೌನ್ ನಿಂದ ಮುಕ್ತಗೊಳಿಸಲಾಗಿದೆ.
ಚಿನ್ನದ ಪೇಟೆಯಲ್ಲಿ ಸೀಲ್ ಡೌನ್ ಮುಂದುವರಿಕೆ: ಚಿನ್ನದ ಪೇಟೆಯೆಂದು ಪ್ರತೀತಿ ಹೊಂದಿರುವ ಬಂಟ್ವಾಳ ತಾಲೂಕಿನ ಬಂಟ್ವಾಳ ಪೇಟೆಯಲ್ಲಿ ಐವರಲ್ಲಿ ಕೊರೋನ ಸೋಂಕು ಪಾಸಿಟಿವ್ ಆಗಿ ಮೂವರು ಮೃತಪಟ್ಟ ಹಿನ್ನೆಲೆಯಲ್ಲಿ ಪೇಟೆಯ 100 ಮೀ. ವ್ಯಾಪ್ತಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಭಾಮಿ ಜಂಕ್ಷನ್ ನಲ್ಲಿ ಮಣ್ಣು ರಾಶಿ ಹಾಕಿ ರಸ್ತೆ ಸಂಚಾರಕ್ಕೆ ತಡೆಹಾಕಲಾಗಿದೆ. ಹಾಗೆಯೇ ಕೊಟ್ರಮಣಗಂಡಿ, ನೆರೆ ವಿಮೋಚನಾ ರಸ್ತೆ ಬಳಿ ಮತ್ತು ಒಳರಸ್ತೆಯನ್ನು ಮುಚ್ಚಲಾಗಿದೆ.
ಲಾಕ್ ಡೌನ್ ಸಡಿಲಿಕೆ: ಒಂದೂವರೆ ತಿಂಗಳ ಬಳಿಕ ಲಾಕ್ ಡೌನ್ ಪ್ರದೇಶದಲ್ಲಿ ಸಡಿಲಿಕೆ ಮಾಡಿರುವ ಬಂಟ್ವಾಳ ಸೀಲ್ ಡೌನ್ ಪ್ರದೇಶ ಹೊರತುಪಡಿಸಿ ಮಾರ್ಕೆಟ್ ರಸ್ತೆಯಲ್ಲಿ ಬಹುತೇಕ ಅಂಗಡಿ ಮುಂಗಟ್ಟು ತೆರೆದಿತ್ತು. ಜವುಳಿ, ಚಿನ್ನಾಭರಣ ಮಳಿಗೆ, ಸೆಲೂನ್, ಬ್ಯೂಟಿಪಾರ್ಲರ್ ಹೊರತಾಗಿ ದಿನಸಿ, ತರಕಾರಿ, ಪುಟ್ ವೇರ್, ಹಾಡ್ ವೇರ್ , ವೈನ್ ಶಾಪ್ ಗಳು ತೆರೆದಿತ್ತು.
ಮದ್ಯ ಖರೀದಿಯ ಭರಾಟೆ: ಆದರೆ ವೈನ್ ಶಾಪ್ ಗಳಿಗೆ ಮಧ್ಯಾಹ್ನದ ವರೆಗೆ ಮದ್ಯ ಖರೀದಿಯ ಭರಾಟೆ ನಡೆದಿತ್ತೆ ವಿನಹ ಇತರ ಅಂಗಡಿಗಳಿಗೆ ವ್ಯವಹಾರ ಅಷ್ಟಕಷ್ಟೆಯಾಗಿತ್ತು. ಮಾರ್ಕೆಟ್ ರಸ್ತೆಯಲ್ಲಂತು ಮಧ್ಯಾಹ್ನದ ಬಳಿಕ ಅಂಗಡಿ,ಮುಂಗಟ್ಟು ತೆರದಿತ್ತೆ ವಿನಹ ಜನಸಂಚಾರವೇ ಇರಲಿಲ್ಲ,ಹಾಗೆಯೇ ಬೆಳಿಗ್ಗೆಯಿಂದ ಒಂದಷ್ಟು ಒಡಾಡುತ್ತಿದ್ದ ಆಟೋರಿಕ್ಷಾಗಳು ಕೂಡ ಹೊತ್ತು ಮೀರಿತ್ತಿದ್ದಂತೆ ಸಂಚಾರವನ್ನು ಸ್ಥಗಿತಗೊಳಿಸಿತು. ಬಂಟ್ವಾಳದ ವೈನ್ ಶಾಪ್ ಗಳ ಮುಂದೆ ಹಾಲಾದ ಬಾಕ್ಸ್ ನಲ್ಲಿ ನಿಂತು ಸರತಿಯ ಮೂಲಕ ಮದ್ಯ ಖರೀದಿಸಿದ ದೃಶ್ಯ ಕಂಡು ಬಂತು.ಕೆಲ ವೈನ್ ಶಾಪ್ ನಲ್ಲಿ ಮಧ್ಯಾಹ್ನದ ಬಳಿಕ ಸ್ಟಾಕ್ ಮುಗಿದಿರುವ ಬಗ್ಗೆಯು ಮಾಹಿತಿಗಳಿವೆ. ಆಗಾಗ ಪೊಲೀಸರು, ಅಬಕಾರಿ ಇಲಾಖಾ ಸಿಬ್ಬಂದಿಗಳು ಅಗಮಿಸಿ ಇಲ್ಲಿ ಹಾಕಿರುವ ಷರತ್ ಪಾಲನೆಯಾಗುತ್ತಿದೆಯೇ ಎಂದು ಪರಿಶೀಲಿಸುತ್ತಿದ್ದರು.







