ದ.ಕ.ಜಿಲ್ಲೆಯಲ್ಲಿ ಭರಪೂರ ಮದ್ಯ ಮಾರಾಟ
ಮಂಗಳೂರು, ಮೇ 4: ದ.ಕ.ಜಿಲ್ಲೆಯ ಕಂಟೈನ್‌ಮೆಂಟ್ ರೆನ್ ಹೊರತುಪಡಿಸಿದ ಪ್ರದೇಶದಲ್ಲಿ ಸೋಮವಾರದಿಂದ ಸಿಎಲ್-2 ಹಾಗೂ ಸಿಎಲ್ 11ಸಿ (ಎಂಎಸ್‌ಐಎಲ್ ಮದ್ಯದ ಮಳಿಗೆ)ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಮದ್ಯದಂಗಡಿ ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿದ ಹಿನ್ನೆಲೆ ಯಲ್ಲಿ ಭರಪೂರ ಮದ್ಯ ಮಾರಾಟವಾಗಿದೆ.
ದ.ಕ. ಜಿಲ್ಲೆಯಲ್ಲಿ ಅನುಮತಿ ಪಡೆದ 172 ಮದ್ಯದಂಗಡಿಗಳಲ್ಲಿ ಸೋಮವಾರ ಬಿರುಸಿನ ವ್ಯಾಪಾರ ನಡೆದಿದೆ. ಕೆಲವು ವೈನ್‌ಶಾಪ್ ಮಾಲಕರ ಪ್ರಕಾರ, ಮೂರು ದಿನಗಳಿಗೆ ಬರುವಷ್ಟು ಗ್ರಾಹಕರು ಒಂದೇ ದಿನ ಆಗಮಿಸಿದ್ದು, ಅಷ್ಟೇ ಪ್ರಮಾಣದ ವ್ಯಾಪಾರವೂ ಆಗಿದೆ ಎಂದು ಹೇಳಿದ್ದಾರೆ.
ದ.ಕ. ಜಿಲ್ಲೆಯ ಅಬಕಾರಿ ಇಲಾಖೆಯ ಮಾಹಿತಿ ಪ್ರಕಾರ 65,751 ಲೀ. ಐಎಂಸಿ ಹಾಗೂ 43,583 ಲೀ. ಬಿಯರ್ ಸೋಮವಾರ ಮಾರಾಟ ವಾಗಿದೆ. ಮಂಗಳೂರಿನಲ್ಲಿ 60,000 ರೂ. ಗಳಿಗಿಂತಲೂ ಅಧಿಕ ವೌಲ್ಯದ ಮದ್ಯವನ್ನು ಒಬ್ಬರೇ ಖರೀದಿಸಿದ ಉದಾಹರಣೆಯೂ ಇದೆ ಎನ್ನಲಾಗಿದೆ. ಅಲ್ಲದೆ ಮುಂಜಾನೆಯಿಂದಲೇ ಕ್ಯೂನಲ್ಲಿ ನಿಂತು ಮದ್ಯ ಖರೀದಿಸಿದವರ ಸಂಖ್ಯೆ ಸಾಕಷ್ಟಿತ್ತು.
ಒಂದು ಮದ್ಯದಂಗಡಿಗೆ ದಿನದಲ್ಲಿ ಸಾಮಾನ್ಯವಾಗಿ 300 ಮಂದಿ ಗ್ರಾಹಕರು ಬರುತ್ತಿದ್ದರೆ, ಸೋಮವಾರ ಇದರ ಮೂರು ಪಟ್ಟು ಅಧಿಕ ಗ್ರಾಹಕರು ಬಂದು ಮದ್ಯ ಖರೀದಿ ಮಾಡಿದ್ದಾರೆ ಎಂದು ಬಾರ್ ಮಾಲಕರೊಬ್ಬರು ತಿಳಿಸಿದ್ದಾರೆ. ಮದ್ಯದ ಅಂಗಡಿಯ ಮುಂದೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಅಲ್ಲದೆ ಸುರಕ್ಷಿತ ಅಂತರ ಕಾಪಾಡುವುದಕ್ಕೂ ವ್ಯವಸ್ಥೆ ಮಾಡಲಾಗಿತ್ತು. ನೂಕು-ನುಗ್ಗಲು ಆಗುವುದನ್ನು ತಪ್ಪಿಸಲು ಭದ್ರತಾ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗಿತ್ತು. ಗ್ರಾಹಕರು ಹಾಗೂ ಸಿಬ್ಬಂದಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಲು, ಸ್ಯಾನಿಟೈಸರ್ ಬಳಸಲು ಸೂಚಿಸಲಾಗಿತ್ತು.
ಅಬಕಾರಿ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದಲ್ಲಿ 10,000ಕ್ಕೂ ಅಧಿಕ ಮದ್ಯದಂಗಡಿಗಳಿದ್ದು, ಪ್ರತಿ ತಿಂಗಳು ಸುಮಾರು 4.27 ಕೋಟಿ ಲೀಟರ್ ಮದ್ಯ ಮಾರಾಟವಾಗುತ್ತದೆ. 2018-19ರಲ್ಲಿ 19,943 ಕೋ.ರೂ. ಆದಾಯ ಸಂಗ್ರಹವಾಗಿತ್ತು. 2019-20ರಲ್ಲಿ 20,950 ಕೋ. ರೂ. ಆದಾಯ ಸಂಗ್ರಹದ ನಿರೀಕ್ಷಿಸಲಾಗಿತ್ತು.
ಸಾಮಾನ್ಯ ದಿನಗಳಷ್ಟೇ ಮಾರಾಟ
ಸಾಮಾನ್ಯ ದಿನಗಳಲ್ಲಿ ಮಾರಾಟವಾಗುವಷ್ಟೇ ಪ್ರಮಾಣದಲ್ಲಿ ಸೋಮವಾರವೂ ದ.ಕ.ಜಿಲ್ಲೆಯಲ್ಲಿ ಮದ್ಯ ಮಾರಾಟ ಆಗಿದೆ. ಉಳಿದ ದಿನಗಳಿಗೆ ಹೋಲಿಕೆ ಮಾಡಿದಾಗ ಇದು ಹೆಚ್ಚು ಎಂಬಂತಿಲ್ಲ. ಅನುಮತಿ ನೀಡಿರುವ 172 ಮದ್ಯದಂಗಡಿಯಲ್ಲಿ ವ್ಯಾಪಾರ ನಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ.
- ಶೈಲಜಾ ಕೋಟೆ, ಉಪ ಆಯುಕ್ತೆ, ಅಬಕಾರಿ ಇಲಾಖೆ ದ.ಕ.







