ಪ.ಬಂಗಾಳದಲ್ಲಿ ಕೋವಿಡ್-19 ಸಾವಿನ ಪ್ರಮಾಣ ದೇಶದಲ್ಲೇ ಗರಿಷ್ಠ: ಅಂತರ್ ಸಚಿವಾಂಗ ತಂಡ ವಿವರಣೆ

ಹೊಸದಿಲ್ಲಿ, ಮೇ 4: ಪಶ್ಚಿಮಬಂಗಾಳದ ಕೆಲವು ಜಿಲ್ಲೆಗಳಲ್ಲಿ ಕೊರೋನಾ ವೈರಸ್ ಸೋಂಕಿನ ಮರಣ ಪ್ರಮಾಣವು ಶೇ.12.8ರಷ್ಟಿದ್ದು, ಇದು ಇಡೀ ದೇಶದಲ್ಲೇ ಗರಿಷ್ಠ ವೆಂದು, ರಾಜ್ಯದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಅಂದಾಜಿಸಲು ನಿಯೋಜಿಸಲಾದ ಕೇಂದ್ರೀಯ ಅಂತರ್ ಸಚಿವಾಂಗ ತಂಡವು ಸೋಮವಾರ ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲಿ ಕೋವಿಡ್-19 ಮರಣ ದರ, ದೇಶದಲ್ಲೇ ಅತ್ಯಧಿಕವಾಗಿರುವುದಕ್ಕೆ ಕನಿಷ್ಠ ಮಟ್ಟದ ತಪಾಸಣೆ, ದುರ್ಬಲವಾದ ಕಣ್ಗಾವಲು ಮತ್ತು ಸೋಂಕಿತರ ಪತ್ತೆಹಚ್ಚುವಿಕೆ ವ್ಯವಸ್ಥೆ ಕಾರಣವೆಂದು ಅದು ಹೇಳಿದೆ.
ಪಶ್ಚಿಮಬಂಗಾಳ ಆರೋಗ್ಯ ಇಲಾಖೆ ಪ್ರಕಟಿಸುವ ಕೋವಿಡ್-19 ಪ್ರಕರಣಗಳ ಕುರಿತಾದ ವೈದ್ಯಕೀಯ ಬುಲೆಟಿನ್‌ಗೂ ಹಾಗೂ ಕೇಂದ್ರ ಸರಕಾರಕ್ಕೆ ಅದು ನೀಡುವ ಸಲ್ಲಿಸುವ ವಿವರಗಳಿಗೂ ವ್ಯತ್ಯಾಸಗಳಿರುವುದು ಪತ್ತೆಯಾಗಿದೆಯೆಂದು ಅಂತರ್ ಸಚಿವಾಂಗ ತಂಡದ ಮುಖ್ಯಸ್ಥ ಅಪೂರ್ವಚಂದ್ರ ತಿಳಿಸಿದ್ದಾರೆ.
ಪಶ್ಚಿಮಬಂಗಾಳದಲ್ಲಿ ಎರಡು ವಾರಗಳ ಕಾಲ ಬೀಡುಬಿಟ್ಟಿದ್ದ ಸಚಿವಾಂಗ ತಂಡವು ಆ ರಾಜ್ಯದ ಕೆಲವು ನಿರ್ದಿಷ್ಟ ಜಿಲ್ಲೆಗಲ್ಲಿ ಕೊರೋನಾ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಯಲು ರಾಜ್ಯ ಸರಕಾರ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದ ಬಳಿಕ ದಿಲ್ಲಿಗೆ ಮರಳಿದೆ.
ಅಂತರ್ ಸಚಿವಾಂಗ ಕೇಂದ್ರೀಯ ತಂಡದ ಪಶ್ಚಿಮ ಬಂಗಾಳ ಭೇಟಿಯು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆಡಳಿತರೂಢ ತೃಣಮೂಲ ಕಾಂಗ್ರೆಸ್ ಸರಕಾರವು, ರಾಜ್ಯಕ್ಕೆ ಆಗಮಿಸಿದ್ದ ಎರಡು ಅಂತರ್ ಸಚಿವಾಂಗ ತಂಡಗಳಿಗೆ ಕೆಲವು ಜಿಲ್ಲೆಗಳನ್ನು ಸಂಪರ್ಕಿಸಲು ಅವಕಾಶ ನೀಡಿಲ್ಲವೆಂಬ ದೂರುಗಳು ಬಂದಿದ್ದವು. ಆ ಬಳಿಕ ಕೇಂದ್ರ ಗೃಹ ಸಚಿವಾಲಯವು ಅಂತರ್ ಸಚಿವಾಂಗ ತಂಡಗಳಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಅವಕಾಶ ನೀಡಬೇಕೆಂದು ಮಮತಾ ಬ್ಯಾನರ್ಜಿ ಸರಕಾರಕ್ಕೆ ನಿರ್ದೇಶ ನೀಡಿತ್ತು.
ಆದರೆ ತಮಗೆ ನಬಾನ್ನ ಜಿಲ್ಲೆ ಹಾಗೂ ಕೊಲೆರಾ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತ ರಾಷ್ಟ್ರೀಯ ಸಂಸ್ಥೆ (ಎನ್‌ಐಸಿಇಡಿ)ಗೆ ಮಾತ್ರ ಭೇಟಿ ಮಾಡಲು ರಾಜ್ಯ ಸರಕಾರಕ್ಕೆ ಅವಕಾಶ ನೀಡಿತ್ತು ಎಂದು ಚಂದ್ರಾ ತಿಳಿಸಿದ್ದಾರೆ.
ಸಮಿತಿಯ ಆರೋಪವನ್ನು ಪಶ್ಚಿಮ ಬಂಗಾಳ ಸರಕಾರ ನಿರಾಕರಿಸಿದೆ. ಈ ತಂಡಗಳ ಭೇಟಿಯ ಬಗ್ಗೆ ತನಗೆ ಪೂರ್ವಭಾವಿಯಾಗಿ ಮಾಹಿತಿ ನೀಡಿರಲ್ಲಿ ಎಂದು ಮಮತಾ ಬ್ಯಾನರ್ಜಿ ಹಾಗೂ ಆಕೆಯ ಪಕ್ಷದ ನಾಯಕರು ಆರೋಪಿಸಿದ್ದಾರೆ.







