ಲಾಕ್ ಡೌನ್ ನಡುವೆ ಆಸ್ಪತ್ರೆಗಳಲ್ಲಿ ಗರ್ಭಿಣಿಗೆ ಸಿಗದ ತುರ್ತು ಸೇವೆ: ಪ್ರಸವಕ್ಕೆ ಮುನ್ನವೇ ಮಗು ಸಾವು

ರಾಂಚಿ: ಪತ್ರಿಕಾ ಛಾಯಾಗ್ರಾಹಕ ವಿನಯ್ ಮುರ್ಮ ಎಂಬವರ ಪತ್ನಿಯ ಹೆರಿಗೆ ಸಂದರ್ಭದಲ್ಲಿ ಹಲವು ಆಸ್ಪತ್ರೆಗಳಲ್ಲಿ ತುರ್ತು ಸೇವೆ ಲಭ್ಯವಾಗದ ಹಿನ್ನೆಲೆಯಲ್ಲಿ ಪ್ರಸವಪೂರ್ವದಲ್ಲೇ ಮಗು ಮೃತಪಟ್ಟಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಮಧ್ಯಂತರ ತನಿಖೆಗೆ ಆದೇಶಿಸಲಾಗಿದೆ ಎಂದು ಜಾರ್ಖಂಡ್ ಆರೋಗ್ಯ ಸಚಿವ ಬನ್ನಾ ಗುಪ್ತಾ ಪ್ರಕಟಿಸಿದ್ದಾರೆ.
ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮುರ್ಮು ದಂಪತಿ ಹೆರಿಗೆಗೆ ಮುನ್ನ ಹಲವು ಆಸ್ಪತ್ರೆಗಳಿಗೆ ಅಲೆದಾಡುವ ಪರಿಸ್ಥಿತಿ ಬಂದಿತ್ತು. ಘಟನೆಯನ್ನು ದುರದೃಷ್ಟಕರ ಎಂದು ಬಣ್ಣಿಸಿರುವ ಸಚಿವರು, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಮೊದಲು ರಾಂಚಿಯ ಹರ್ಮು ಪ್ರದೇಶದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾಗಿ ವಿನಯ್ ಹೇಳಿದ್ದಾರೆ. ಆದರೆ ಅಲ್ಲಿ ವೈದ್ಯರು ಇಲ್ಲ ಎಂದು ಹೇಳಿ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಥವಾ ಸರ್ದಾರ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಲಾಯಿತು. ಆದರೆ ಎರಡೂ ಆಸ್ಪತ್ರೆಗಳ ತುರ್ತುಚಿಕಿತ್ಸಾ ವಾರ್ಡ್ಗಳು ಮುಚ್ಚಿದ್ದವು. ಬಳಿಕ ಸಿವಿಲ್ ಸರ್ಜನ್ ಅವರಿಗೆ ವಿನಯ್ ಕರೆ ಮಾಡಿದ್ದು, ದೋರಂಡಾ ಔಷಧಾಲಯಕ್ಕೆ ಕರೆದೊಯ್ಯುವಂತೆ ಅವರು ಸಲಹೆ ಮಾಡಿದರು. ಅಲ್ಲಿ ಮಹಿಳಾ ವೈದ್ಯರು ಇಲ್ಲದ ಕಾರಣ ಅದು ಕೂಡಾ ಪ್ರಯೋಜನಕ್ಕೆ ಬರಲಿಲ್ಲ. ಮತ್ತೆ ದಂಪತಿಯನ್ನು ಆರ್ಐಎಂಎಸ್ಗೆ ಹೋಗಲು ಸೂಚಿಸಲಾಯಿತು. ಆ ವೇಳೆಗೆ ವಿನಯ್ ಪತ್ನಿಯ ದೇಹಸ್ಥಿತಿ ವಿಷಮಿಸತೊಡಗಿತು. ಗುರುನಾನಕ್ ಅಸ್ಪತ್ರೆಗೆ ಅವರನ್ನು ಕರೆದೊಯ್ದಾಗ, ಮಗು ಈಗಾಗಲೇ ಗರ್ಭದಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಆರೋಪಿಸಲಾಗಿದೆ.
“ಪತ್ನಿ ತೀವ್ರ ನಿಗಾ ಘಟಕದಲ್ಲಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಈ ದುಃಖದಿಂದ ಸದ್ಯಕ್ಕೆ ಚೇತರಿಸಿಕೊಳ್ಳುವುದು ಕಷ್ಟ. ಹುಟ್ಟಿದ ಅಥವಾ ಹುಟ್ಟುವ ಮುನ್ನ ಮಗುವನ್ನು ಕಳೆದುಕೊಳ್ಳುವುದು ದೊಡ್ಡ ನಷ್ಟ”ಎಂದು ಪತ್ರಿಕಾ ಛಾಯಾಗ್ರಾಹಕರಾಗಿರುವ ವಿನಯ್ ಹೇಳಿದರು.
ಕೆಲ ದಿನಗಳ ಹಿಂದೆ ಮತ್ತೊಬ್ಬ ಪತ್ರಕರ್ತ ಪ್ರವೀಣ್ ಎಂಬುವವರು ಕೂಡಾ ಇದೇ ರೀತಿ ಮಗುವನ್ನು ಕಳೆದುಕೊಂಡಿದ್ದರು. ಪ್ರವೀಣ್ ಪತ್ನಿಗೆ ಹೆರಿಗೆ ನೋವು ಬಂದ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರವೀಣ್ ಅವರ ಮಗು ಕೂಡಾ ಗರ್ಭದಲ್ಲೇ ಸಾವನ್ನಪ್ಪಿತ್ತು.