ಆರ್ಥಿಕ ಪುನಶ್ಚೇತನಕ್ಕಾಗಿ ಭಾರತದ ಶೇ.60ರಷ್ಟು ಕಡುಬಡವರಿಗೆ ನಗದು ವರ್ಗಾವಣೆ ಮಾಡಿ
ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಸಲಹೆ
ಹೊಸದಿಲ್ಲಿ: ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಶೇಕಡ 60ರಷ್ಟು ಕಡುಬಡವರಿಗೆ ನಗದು ವರ್ಗಾವಣೆ ಮಾಡುವ ಮೂಲಕ ಆರ್ಥಿಕತೆ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಸಲಹೆ ನೀಡಿದ್ದಾರೆ.
ಜನರ ಖರ್ಚು ಮಾಡುವ ಶಕ್ತಿಯನ್ನು ಹೆಚ್ಚಿಸುವುದು, ಎಂಎಸ್ಎಂಇಗಳಿಗೆ ನಿರ್ದಿಷ್ಟ ಪ್ಯಾಕೇಜ್ ನೀಡುವುದಕ್ಕಿಂತ ಒಳ್ಳೆಯ ಆಯ್ಕೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಜತೆಗಿನ ಸಂವಾದದಲ್ಲಿ ಬ್ಯಾನರ್ಜಿ ಅಭಿಪ್ರಾಯಪಟ್ಟರು.
“ಎಂಎಸ್ಎಂಇ ವಲಯವನ್ನು ಗುರಿ ಮಾಡುವುದು ಸ್ಪಷ್ಟವಾಗಿಲ್ಲ. ವಾಸ್ತವವಾಗಿ ಬೇಡಿಕೆ ಚೇತರಿಸಿಕೊಳ್ಳಬೇಕು. ಪ್ರತಿಯೊಬ್ಬರ ಕೈಯಲ್ಲಿ ಹಣ ನೀಡುವ ಮೂಲಕ ಅವರು ಗ್ರಾಹಕ ವಸ್ತುಗಳನ್ನು ಮಳಿಗೆಗಳಲ್ಲಿ ಖರೀದಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ”ಎಂದು ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ವಿಡಿಯೊ ಚಾಟ್ನಲ್ಲಿ ಹೇಳಿದರು.
“ನೀವು ಕೆಂಪು ವಲಯದಲ್ಲಿದ್ದರೆ, ಲಾಕ್ಡೌನ್ ಮುಗಿಯುವ ವೇಳೆಗೆ ನಿಮ್ಮ ಖಾತೆಯಲ್ಲಿ ಹಣ ಇರಬೇಕು; 10 ಸಾವಿರ ರೂಪಾಯಿ ನಿಮ್ಮ ಖಾತೆಯಲ್ಲಿದ್ದರೆ, ಅದನ್ನು ನೀವು ಖರ್ಚು ಮಾಡಬಹುದು. ನನ್ನ ಪ್ರಕಾರ ಆರ್ಥಿಕ ಪುನಶ್ಚೇತನಕ್ಕೆ ವೆಚ್ಚವೇ ಅತ್ಯಂತ ಸರಳ ಮಾರ್ಗ” ಎಂದು ಅವರು ವಿವರಿಸಿದರು.
ಅಮೆರಿಕದ ಮೆಸೆಚುಚೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಫೋರ್ಡ್ ಫೌಂಡೇಷನ್ ಅಂತರರಾಷ್ಟ್ರೀಯ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಬ್ಯಾನರ್ಜಿ, ಕೆಳಹಂತದ ಶೇಕಡ 60ರಷ್ಟು ಮಂದಿಗೆ ಹಣ ವರ್ಗಾಯಿಸುವುದು ಮತ್ತು ಅವರು ಅದನ್ನು ವೆಚ್ಚ ಮಾಡುವುದು ಒಳ್ಳೆಯ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟರು.
ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ಹರಡುವ ಮುನ್ನವೂ ಬೇಡಿಕೆಯ ಸಮಸ್ಯೆ ಇತ್ತು. ಇದೀಗ ಮತ್ತಷ್ಟು ಹದಗೆಟ್ಟಿದೆ ಎಂದು ಬ್ಯಾನರ್ಜಿ ಹೇಳಿದರು.