ತೆಲಂಗಾಣದಲ್ಲಿ ಮೇ 29ರ ತನಕ ಲಾಕ್ಡೌನ್
ಹೈದರಾಬಾದ್ ಮೇ 6: ಕೊರೋನವೈರಸ್ನ್ನು ಹತೋಟಿಗೆ ತರಲು ದೇಶಾದ್ಯಂತ ಜಾರಿಗೆ ತರಲಾಗಿರುವ ಲಾಕ್ಡೌನ್ನ್ನು ಮೇ 29ರ ತನಕವೂ ವಿಸ್ತರಿಸಲು ತೆಲಂಗಾಣ ರಾಜ್ಯ ಸರಕಾರ ನಿರ್ಧರಿಸಿದೆ.
ಜನತೆ ಲಾಕ್ಡೌನ್ ವಿಸ್ತರಣೆಯಾಗುವುದನ್ನು ಬಯಸುತ್ತಿದ್ದಾರೆ. ನಮ್ಮ ನಿರ್ಧಾರದ ಬಗ್ಗೆ ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಿದ್ದೇನೆ ಎಂದು ಮಂಗಳವಾರ ಸಂಜೆ 7 ಗಂಟೆಗಳ ಕಾಲ ಸಂಪುಟ ಸಭೆಯ ಬಳಿಕ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಸುದ್ದಿಗಾರರಿಗೆ ತಿಳಿಸಿದರು.
ತೆಲಂಗಾಣದ ರಾಜ್ಯದ ಆರು ಜಿಲ್ಲೆಗಳು ರೆಡ್ ವಲಯದಲ್ಲಿವೆ. 18 ಜಿಲ್ಲೆಗಳು ಆರೆಂಜ್ ಹಾಗೂ 9 ಜಿಲ್ಲೆಗಳು ಗ್ರೀನ್ ವಲಯದಲ್ಲಿವೆ. ಮೂರು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಸೋಂಕು ವರದಿಯಾಗಿದೆ. ಜಿಎಚ್ಎಂಸಿ, ರಂಗ ರೆಡ್ಡಿ ಹಾಗೂ ಮೆದ್ಚಾಲ್ ಜಿಲ್ಲೆಗಳಲ್ಲಿನ ಪರಿಸ್ಥಿತಿ ಕೆಟ್ಟದ್ದಾಗಿದೆ ಎಂದು ರಾವ್ ತಿಳಿಸಿದರು.
ರೆಡ್ ವಲಯದಲ್ಲೂ ಅಂಗಡಿಗಳನ್ನು ತೆರೆಯಬಹುದು ಎಂದು ಕೇಂದ್ರ ಸರಕಾರ ತಿಳಿಸಿದೆ. ನಾವು ಹೈದರಾಬಾದ್, ಮೆಡ್ಚಾಲ್, ಸೂರ್ಯಪೇಟ್, ವಿಕಾರಬಾದ್ನಲ್ಲಿ ಅಂಗಡಿಯನ್ನು ತೆರೆದಿಲ್ಲ ಎಂದು ರಾವ್ ಹೇಳಿದರು.
ತೆಲಂಗಾಣ ರಾಜ್ಯದಲ್ಲಿ ಈ ತನಕ 1,096 ಕೊರೋನ ಪ್ರಕರಣ ವರದಿಯಾಗಿದ್ದು, ಈ ಪೈಕಿ 439 ಜನರು ಚಿಕಿತ್ಸೆ ಪಡೆಯುತ್ತಿದ್ದರೆ, 628 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೇಂದ್ರ ಸರಕಾರ ಎರಡನೇ ಬಾರಿ ಲಾಕ್ಡೌನ್ ವಿಸ್ತರಿಸುವ ಮೊದಲೇ ತೆಲಂಗಾಣ ರಾಜ್ಯ ಮೇ 7ರ ತನಕ ಲಾಕ್ಡೌನ್ ವಿಸ್ತರಿಸಿತ್ತು.