ಆರೋಗ್ಯ ಸೇತು ಆ್ಯಪ್ನಲ್ಲಿ ಭದ್ರತಾ ಉಲ್ಲಂಘನೆಯಾಗಿಲ್ಲ: ಕೇಂದ್ರ ಸರಕಾರ ಸ್ಪಷ್ಟನೆ

ಹೊಸದಿಲ್ಲಿ,ಮೇ 6: ಕೊರೋನ ವೈರಸ್ ಪತ್ತೆ ಆ್ಯಪ್ ಆರೋಗ್ಯ ಸೇತುವಿನಲ್ಲಿ ಯಾವುದೇ ಭದ್ರತಾ ಉಲ್ಲಂಘನೆಯಾಗಿಲ್ಲ ಎಂದು ಕೇಂದ್ರ ಸರಕಾರ ಇಂದು ಸ್ಪಷ್ಟಪಡಿಸಿದೆ.
ಫ್ರೆಂಚ್ ವೈಟ್ ಹ್ಯಾಟ್ ಅಥವಾ ಎಥಿಕಲ್ ಹ್ಯಾಕರ್ ನೀಡಿದ್ದ ಅಪಾಯದ ಎಚ್ಚರಿಕೆಗೆ ಕೇಂದ್ರ ಸರಕಾರ ಬುಧವಾರ ಪ್ರತಿಕ್ರಿಯೆ ನೀಡಿದೆ. 90 ಮಿಲಿಯನ್ ಭಾರತೀಯರ ಗೌಪ್ಯತೆ ಅಪಾಯದಲ್ಲಿದೆ ಎಂದು ಫ್ರೆಂಚ್ ಹ್ಯಾಕರ್ ಮಂಗಳವಾರ ಎಚ್ಚರಿಕೆ ನೀಡಿದ್ದ.
ಇಂದು ಬೆಳಗ್ಗೆ ವಿವರವಾದ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸರಕಾರ, ಯಾವುದೇ ಡಾಟಾ ಅಥವಾ ಭದ್ರತಾ ಉಲ್ಲಂಘನೆಯಾಗಿಲ್ಲ. ಯಾವುದೇ ನೈತಿಕ ಹ್ಯಾಕರ್ನಿಂದ ಯಾವುದೇ ಬಳಕೆದಾರರ ವೈಯಕ್ತಿಕ ಮಾಹಿತಿ ಅಪಾಯದಲ್ಲಿದೆ ಎಂದು ಸಾಬೀತಾಗಿಲ್ಲ ಎಂದು ತಿಳಿಸಿದೆ.
ಈ ಹಿಂದೆ ಆಧಾರ್ ಅಪ್ಲಿಕೇಶನ್ನ ನೂನ್ಯತೆಯನ್ನು ಬಹಿರಂಗಪಡಿಸಿದ್ದ ಎಲಿಯಟ್ ಆಲ್ಡರ್ಸನ್ ಹೆಸರಿನ ಹ್ಯಾಕರ್ ಮಂಗಳವಾರ ಭದ್ರತಾ ಸಮಸ್ಯೆಯ ಬಗ್ಗೆ ಎಚ್ಚರಿಕೆ ನೀಡುವ ಸರಣಿ ಟ್ವೀಟ್ಗಳನ್ನು ಮಾಡಿದ್ದ. ರಾಹುಲ್ ಗಾಂಧಿ ಹೇಳಿದ್ದು ಸರಿ ಎಂದಿರುವ ಆತ ಕಾಂಗ್ರೆಸ್ ಸಂಸದರನ್ನು ತಮ್ಮ ಟ್ವೀಟ್ನಲ್ಲಿ ಟ್ಯಾಗ್ ಮಾಡಿದ್ದಾನೆ. ಹಾಯ್, ಆರೋಗ್ಯ ಸೇತು, ನಿಮ್ಮ ಅಪ್ಲಿಕೇಶನ್ನಲ್ಲಿ ಭದ್ರತಾ ಸಮಸ್ಯೆ ಕಂಡುಬಂದಿದೆ. 90 ಮಿಲಿಯನ್ ಭಾರತೀಯರ ಗೌಪ್ಯತೆ ಅಪಾಯದಲ್ಲಿದೆ. ನೀವು ನಮ್ಮನ್ನು ಖಾಸಗಿಯಾಗಿ ಸಂಪರ್ಕಿಸಬಹುದೇ? ಅಭಿನಂದನೆಗಳು ಎಂದು ಎಲಿಯಟ್ ಬರೆದಿದ್ದಾನೆ.
ಆರೋಗ್ಯ ಸೇತು ಆ್ಯಪ್ ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದರು. ಇದಕ್ಕೆ ಉತ್ತರಿಸಿದ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್,ದಿನವೂ ಹೊಸ ಸುಳ್ಳು. ಆರೋಗ್ಯ ಸೇತು ಶಕ್ತಿಶಾಲಿ ಒಡನಾಡಿಯಾಗಿದ್ದು, ಇದು ಜನರನ್ನು ರಕ್ಷಿಸುತ್ತದೆ ಎಂದು ಟ್ವೀಟ್ ಮಾಡಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರು ಆರೋಗ್ಯ ಆ್ಯಪ್ಗೆ ಹೆಚ್ಚು ಪ್ರಚಾರ ನೀಡುತ್ತಿದ್ದು, ಖಾಸಗಿ ಹಾಗೂ ಸರಕಾರಿ ವಲಯದ ಉದ್ಯೋಗಿಗಳು ಆ್ಯಪ್ನ್ನು ಕಡ್ಡಾಯವಾಗಿ ಬಳಸಬೇಕು ಎಂದು ಆದೇಶಿಸಲಾಗಿದೆ. ಕೇಂದ್ರ ಸರಕಾರ ಮುಂದಿನ ಕೆಲವೇ ವಾರಗಳಲ್ಲಿ 30 ಕೋಟಿ ಆ್ಯಪ್ ಡೌನ್ ಲೋಡ್ ಮಾಡುವ ಗುರಿ ಇಟ್ಟುಕೊಂಡಿದೆ.