ಬೆಳಗಾವಿ: ಜಿಲ್ಲಾಧಿಕಾರಿ ನಿವಾಸದ ಎದುರೇ ಗುಂಡು ಹಾರಿಸಿಕೊಂಡು ಪೇದೆ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ಬೆಳಗಾವಿ, ಮೇ 6: ಜಿಲ್ಲಾಧಿಕಾರಿ ನಿವಾಸದ ಎದುರೇ ಪೊಲೀಸ್ ಪೇದೆಯೊಬ್ಬರು ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳಿಂದ ಒತ್ತಡವೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಎರಡು ತಿಂಗಳಿನಿಂದ ರಜೆ ಇಲ್ಲದೆ, ಮನೆಗೆ ಹೋಗಲಾಗದೆ ಒತ್ತಡಕ್ಕೆ ಸಿಲುಕಿದ್ದರಿಂದ ನಗರದ ಜಿಲ್ಲಾಧಿಕಾರಿ ನಿವಾಸದ ಭದ್ರತೆಗೆ ನಿಯೋಜಿತಗೊಂಡಿದ್ದ ಪೊಲೀಸ್ ಪೇದೆ ಪ್ರಕಾಶ್(30) ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಬೆಳಗಾವಿ ಜಿಲ್ಲಾಧಿಕಾರಿ ಅವರ ವಿಶ್ವೇಶ್ವರಯ್ಯ ನಗರದಲ್ಲಿರುವ ನಿವಾಸದ ಭದ್ರತೆಗಿದ್ದ ಪೇದೆ ಪ್ರಕಾಶ್ ಮಾನಸಿಕ ಹಾಗೂ ರಜೆಯಿಲ್ಲದ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಿತ್ತೂರು ತಾಲೂಕಿನ ನಿವಾಸಿಯಾಗಿದ್ದ ಪೇದೆ ಪ್ರಕಾಶ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಲೋಕೇಶ್ ಕುಮಾರ್, ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







