ಕೊರೋನ ಪ್ರಕೃತಿಯಲ್ಲಿ ಸಹಜವಾಗಿ ವಿಕಾಸಗೊಂಡ ವೈರಸ್
ಅಮೆರಿಕದ ಖ್ಯಾತ ಸಾಂಕ್ರಾಮಿಕ ರೋಗ ತಜ್ಞ

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮೇ 6: ನೂತನ-ಕೊರೋನ ವೈರಸ್ ಪ್ರಕೃತಿಯಲ್ಲಿ ಸಹಜವಾಗಿಯೇ ವಿಕಾಸಗೊಂಡಿದೆ ಎಂದು ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞ ಆ್ಯಂಟನಿ ಫೌಸಿ ಅಭಿಪ್ರಾಯಪಟ್ಟಿದ್ದಾರೆ.
ಅತ್ಯಂತ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುವ ವೈರಸನ್ನು ಚೀನಾದ ವುಹಾನ್ ನಗರದ ಪ್ರಯೋಗಾಲಯವೊಂದರಲ್ಲಿ ಸೃಷ್ಟಿಸಲಾಗಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಆ ದೇಶದ ಇತರ ಹಿರಿಯ ಅಧಿಕಾರಿಗಳ ನಿಲುವಿಗೆ ವಿರುದ್ಧವಾದ ಅಭಿಪ್ರಾಯವನ್ನು ಫೌಸಿ ವ್ಯಕ್ತಪಡಿಸಿದ್ದಾರೆ.
ಬಾವಲಿಗಳಲ್ಲಿ ವೈರಸ್ ವಿಕಾಸಗೊಂಡಿರುವ ರೀತಿ ಮತ್ತು ಈಗ ಮಾನವರ ಮೇಲೆ ದಾಳಿ ಮಾಡುತ್ತಿರುವ ವೈರಸ್ ವಿಕಾಸಗೊಂಡಿರುವ ರೀತಿಯನ್ನು ಗಮನಿಸಿದರೆ, ಈ ವೈರಸ್ ಕೃತಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಸೃಷ್ಟಿಸಲ್ಪಟ್ಟಿದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಸಿಗುವುದಿಲ್ಲ ಎಂದು ಸೋಮವಾರ ಸಂಜೆ ನ್ಯಾಶನಲ್ ಜಿಯಾಗ್ರಾಫಿಕ್ ಮ್ಯಾಗಝಿನ್‌ಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದರು.
ಇದು ಕಾಲಾನುಕ್ರಮದಲ್ಲಿ ಹಂತ ಹಂತವಾಗಿ ವಿಕಾಸಗೊಂಡಿರುವ ವೈರಸ್. ಹಾಗಾಗಿ, ಈ ವೈರಸ್ ಪ್ರಕೃತಿಯಲ್ಲೇ ವಿಕಾಸಗೊಂಡಿದೆ ಹಾಗೂ ಬಳಿಕ ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಹಾರಿದೆ ಎನ್ನುವುದನ್ನು ಇದು ಪ್ರಬಲವಾಗಿ ಪ್ರತಿಪಾದಿಸುತ್ತದೆ ಎಂದು ಅವರು ಹೇಳಿದರು.
ವೈರಸ್ ಪ್ರಯೋಗಾಲಯದಲ್ಲಿ ಸೃಷ್ಟಿಸಲ್ಪಟ್ಟಿದೆ ಎನ್ನುವುದಕ್ಕೆ ಪುರಾವೆಯಿಲ್ಲ ಎಂಬ ಅಭಿಪ್ರಾಯವನ್ನು ವಿಶ್ವ ಆರೋಗ್ಯ ಸಂಸ್ಥೆಯೂ ವ್ಯಕ್ತಪಡಿಸಿದೆ.





