ದೇಶದಲ್ಲಿ 50,000ದತ್ತ ಹೆಜ್ಜೆ ಹಾಕುತ್ತಿರುವ ಕೋವಿಡ್-19 ಪ್ರಕರಣಗಳ ಸಂಖ್ಯೆ
24 ಗಂಟೆಗಳಲ್ಲಿ 2,958 ಹೊಸ ಪ್ರಕರಣಗಳು ಮತ್ತು 126 ಸಾವುಗಳು ವರದಿ
ಹೊಸದಿಲ್ಲಿ,ಮೇ 6: ಭಾರತದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 50,000ದತ್ತ ದಾಪುಗಾಲು ಹಾಕುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 2,958 ಹೊಸ ಪ್ರಕರಣಗಳು ಮತ್ತು 126 ಸಾವುಗಳು ವರದಿಯಾಗಿದ್ದು,ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 49,391ಕ್ಕೆ ಮತ್ತು ಸಾವುಗಳ ಸಂಖ್ಯೆ 1,694ಕ್ಕೇರಿದೆ. ಕೊರೋನ ವೈರಸ್ ಒಡ್ಡಿರುವ ಸವಾಲನ್ನು ಎದುರಿಸಲು ರಚಿಸಲಾಗಿರುವ ವಿಶೇಷ ಕಾರ್ಯಪಡೆಯು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಪ್ರಚಲಿತ ಸ್ಥಿತಿಯ ಬಗ್ಗೆ ಚರ್ಚಿಸಿತ್ತು. ತನ್ಮಧ್ಯೆ,ರಾಜ್ಯಾದ್ಯಂತ ಕೋವಿಡ್-19 ಲಾಕ್‌ಡೌನ್ ಅನ್ನು ಮೇ 29ರವರೆಗೆ ವಿಸ್ತರಿಸಲು ತೆಲಂಗಾಣವು ನಿರ್ಧರಿಸಿದೆ.
‘ಲಾಕ್‌ಡೌನ್ ವಿಸ್ತರಣೆಯಾಗಬೇಕು ಎಂದು ರಾಜ್ಯದ ಜನರು ಬಯಸಿದ್ದಾರೆ. ನಮ್ಮ ನಿರ್ಧಾರವನ್ನು ಪ್ರಧಾನ ಮಂತ್ರಿಗಳಿಗೆ ತಿಳಿಸಲಾಗಿದೆ ’ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಮಂಗಳವಾರ ಸಂಜೆ ಏಳು ಗಂಟೆಯಷ್ಟು ಸುದೀರ್ಘ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
Next Story