ಮಲೇರಿಯ ಔಷಧದ ಕುರಿತ ವೈದ್ಯರ ಕಳವಳವನ್ನು ನಿರ್ಲಕ್ಷಿಸಿದ ಟ್ರಂಪ್ ಸರಕಾರ
ವಜಾಗೊಂಡ ವಿಜ್ಞಾನಿ ಆರೋಪ

ವಾಶಿಂಗ್ಟನ್, ಮೇ 6: ಭಾರತ ಮತ್ತು ಪಾಕಿಸ್ತಾನದಲ್ಲಿನ ತಪಾಸಣೆ ನಡೆಯದ ಕಾರ್ಖಾನೆಗಳಿಂದ ಹೈಡ್ರಾಕ್ಸಿಕ್ಲೋರೋಕ್ವಿನ್ ಗುಳಿಗೆಗಳನ್ನು ಆಮದು ಮಾಡುವುದಕ್ಕೆ ಸಂಬಂಧಿಸಿ ಅಮೆರಿಕದ ವೈದ್ಯರು ವ್ಯಕ್ತಪಡಿಸಿದ ಆತಂಕವನ್ನು ಟ್ರಂಪ್ ಸರಕಾರ ನಿರ್ಲಕ್ಷಿಸಿತು ಹಾಗೂ ಸಾಬೀತಾಗದ ಮತ್ತು ಸಂಭಾವ್ಯ ಅಪಾಯಕಾರಿ ಮಲೇರಿಯ ಔಷಧಿಯನ್ನು ಅಗಾಧ ಪ್ರಮಾಣದಲ್ಲಿ ತಂದು ರಾಶಿ ಹಾಕಿತು ಎಂದು ಅಮೆರಿಕದ ವಿಜ್ಞಾನಿಯೊಬ್ಬರು ಆರೋಪಿಸಿದ್ದಾರೆ.
ಆರೋಗ್ಯ ಮತ್ತು ಮಾನವ ಸೇವೆ (ಎಚ್‌ಎಚ್‌ಎಸ್)ಗಳ ಇಲಾಖೆಯ ಉನ್ನತ ಅಧಿಕಾರಿಗಳು, ವೈಯಕ್ತಿಕ ಸುರಕ್ಷಾ ಸಲಕರಣೆಗಳು ಮತ್ತು ಮುಖ್ಯವಾಗಿ ಹೈಡ್ರಾಕ್ಸಿಕ್ಲೋರೋಕ್ಷಿನ್‌ನಂಥ ಔಷಧಿಗಳ ಬಗ್ಗೆ ನಾನು ಮತ್ತು ಇತರರು ಸಲ್ಲಿಸಿದ ಆಕ್ಷೇಪಗಳನ್ನು ಪದೇ ಪದೇ ನಿರ್ಲಕ್ಷಿಸಿದರು ಎಂದು ರಿಕ್ ಬ್ರೈಟ್ ವಿಶೇಷ ವಕೀಲರ ಕಚೇರಿಗೆ ಮಂಗಳವಾರ ಸಲ್ಲಿಸಿದ ದೂರಿನಲ್ಲಿ ಹೇಳಿದ್ದಾರೆ.
ವಿಶೇಷ ವಕೀಲರ ಕಚೇರಿಯು ಹಗರಣಗಳನ್ನು ಬಯಲಿಗೆಳೆಯುವವರಿಗೆ ರಕ್ಷಣೆ ನೀಡುತ್ತದೆ.
ರಿಕ್ ಬ್ರೈಟ್ ಎಚ್‌ಎಚ್‌ಎಸ್‌ನ ವ್ಯಾಪ್ತಿಯಲ್ಲೇ ಬರುವ ಸಂಶೋಧನಾ ಸಂಸ್ಥೆ ಜೈವಿಕವೈದ್ಯಕೀಯ ಸುಧಾರಿತ ಸಂಶೋಧನಾ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರಾಗಿದ್ದರು. ಬಳಿಕ ಅವರನ್ನು ವಜಾಗೊಳಿಸಲಾಗಿತ್ತು.





