ಲಾಕ್ ಡೌನ್ ನಿಂದ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರ ಸಂಖ್ಯೆ ಕಾರ್ಮಿಕ ಸಚಿವಾಲಯಕ್ಕೆ ಗೊತ್ತಿಲ್ಲ!
ಆರ್ ಟಿಐಯಿಂದ ಬಹಿರಂಗ

ಹೊಸದಿಲ್ಲಿ: ದೇಶವ್ಯಾಪಿ ಲಾಕ್ ಡೌನ್ ನಿಂದಾಗಿ ಸಿಕ್ಕಿ ಹಾಕಿಕೊಂಡ ವಲಸೆ ಕಾರ್ಮಿಕರ ಸಂಖ್ಯೆ ಎಷ್ಟು ಎನ್ನುವುದನ್ನು ಗಣತಿ ಮಾಡುವಂತೆ ಮುಖ್ಯ ಕಾರ್ಮಿಕ ಆಯುಕ್ತರ ಕಚೇರಿ ಆದೇಶ ಮಾಡಿತ್ತು. ಆದರೆ ಈ ಕುರಿತ ಯಾವ ಅಂಕಿ ಅಂಶವೂ ಲಭ್ಯವಿಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದೆ.
ಕಾಮನ್‍ವೆಲ್ತ್ ಹ್ಯೂಮನ್‍ರೈಟ್ಸ್ ಇನೀಶಿಯೇಟಿವ್ ಕಾರ್ಯಕರ್ತ ವೆಂಕಟೇಶ್ ನಾಯಕ್ ಎಂಬವರು ಅರ್ಜಿ ಸಲ್ಲಿಸಿದ್ದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಿಕ್ಕಿಹಾಕಿಕೊಂಡ ಕಾರ್ಮಿಕರ ಸಂಖ್ಯೆ ಎಷ್ಟು ಎಂಬ ಬಗ್ಗೆ ಮೂರು ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಎಲ್ಲ ಪ್ರಾದೇಶಿಕ ಕಚೇರಿಗಳಿಗೆ ಸೂಚಿಸಲಾಗಿತ್ತು. ಆದರೆ ಮುಖ್ಯ ಆಯುಕ್ತರ ಕಚೇರಿಯಲ್ಲಿ ಈ ಬಗ್ಗೆ ಯಾವ ಮಾಹಿತಿಯೂ ಇಲ್ಲ ಎಂದು ಅವರು ಹೇಳಿದ್ದಾರೆ.
ನಾಯಕ್ ಅವರು ರಾಜ್ಯವಾರು ಹಾಗೂ ಜಿಲ್ಲಾವಾರು ವಲಸೆ ಕಾರ್ಮಿಕರ ಅಂಕಿ ಅಂಶಕ್ಕೆ ಮನವಿ ಮಾಡಿದ್ದರು. ಈ ಅರ್ಜಿಗೆ ಉತ್ತರಿಸಿದ ಕೇಂದ್ರ ಕಾರ್ಮಿಕ ಆಯುಕ್ತರ ಕಚೇರಿ, ಇಂಥ ಯಾವುದೇ ಅಂಕಿ ಅಂಶ ಲಭ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.





