ಕಿಮ್‌ಗೆ ಹೃದಯ ಶಸ್ತ್ರಚಿಕಿತ್ಸೆ ಆದ ಕುರುಹುಗಳಿಲ್ಲ: ದಕ್ಷಿಣ ಕೊರಿಯ ಸಂಸದರು

ಸಿಯೋಲ್ (ದಕ್ಷಿಣ ಕೊರಿಯ), ಮೇ 6: ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮೂರು ವಾರಗಳ ಕಾಲ ಸಾರ್ವಜನಿಕವಾಗಿ ನಾಪತ್ತೆಯಾಗಿದ್ದ ಅವಧಿಯಲ್ಲಿ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಯಾವುದೇ ಕುರುಹುಗಳು ಇಲ್ಲ ಎಂದು ಗುಪ್ತಚರ ಸಂಸ್ಥೆಯಿಂದ ಮಾಹಿತಿ ಪಡೆದಿರುವ ದಕ್ಷಿಣ ಕೊರಿಯದ ಸಂಸದರು ಬುಧವಾರ ಹೇಳಿದ್ದಾರೆ. ಕೊರೋನ ವೈರಸ್‌ನಿಂದ ದೂರವಿರುವುದಕ್ಕಾಗಿ ಅವರು ಸಾರ್ವಜನಿಕ ಚಟುವಟಿಕೆಗಳಲ್ಲಿ ಭಾಗವಹಿಸಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅವರು ಎಪ್ರಿಲ್ 11ರಂದು ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಹಲವು ಊಹಾಪೋಹಗಳ ಬಳಿಕ, ಅವರು ಮೇ 2ರಂದು ರಸಗೊಬ್ಬರ ಕಾರ್ಖಾನೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ, ಕಿಮ್‌ರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂಬುದಾಗಿ ಅಂತರ್‌ರಾಷ್ಟ್ರಿಯ ಮಾಧ್ಯಮಗಳು ವರದಿ ಮಾಡಿದ್ದವು.
ಆದರೆ, ಅವರು ಹೃದಯ ಶಸ್ತ್ರಚಿಕಿತ್ಸೆತೆ ಒಳಗಾಗಿರುವ ಯಾವುದೇ ಕುರುಹುಗಳು ಕಂಡುಬಂದಿಲ್ಲ ಎಂದು ನ್ಯಾಶನಲ್ ಇಂಟಲಿಜನ್ಸ್ ಸರ್ವಿಸ್‌ನ್ನು ಉಲ್ಲೇಖಿಸಿ ದಕ್ಷಿಣ ಕೊರಿಯದ ಸಂಸದರು ಹೇಳಿದ್ದಾರೆ.





