ಬೆಂಗಳೂರಿನಲ್ಲಿ ಕೊರೋನ ಸೋಂಕಿತರ ಸಂಖ್ಯೆ 155ಕ್ಕೆ ಏರಿಕೆ

ಬೆಂಗಳೂರು, ಮೇ 6: ಹೊಂಗಸಂದ್ರದ ಮಂಗಮ್ಮನಪಾಳ್ಯದ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 45 ವರ್ಷದ ವ್ಯಕ್ತಿಯ ಮಗ ಮತ್ತು ಪತ್ನಿಗೆ ಕೊರೋನ ಸೋಂಕು ದೃಢಪಟ್ಟಿದೆ.
ಬುಧವಾರದ ವರದಿಯಲ್ಲಿ ಮಗ, ಪತ್ನಿಗೆ ಕೊರೋನ ಪತ್ತೆಯಾಗಿದ್ದು, ಆತನ ಮಗ ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದು ಸಾಕಷ್ಟು ಮನೆಗಳಿಗೆ ಆಹಾರ ಹಾಗೂ ವಸ್ತುಗಳನ್ನು ವಿತರಿಸಿದ್ದಾನೆ. ಇನ್ನು ಕೊರೋನ ದೃಢಪಟ್ಟರೆ ಸಾಕಷ್ಟು ಜನರಿಗೆ ಕೊರೋನ ಸೋಂಕು ಹರಡಿರುವ ಸಾಧ್ಯತೆ ಹೆಚ್ಚಾಗಿದೆ. 654ನೇ ರೋಗಿ ವಾಸವಿದ್ದ ಮನೆಯ ಅಕ್ಕ ಪಕ್ಕದ 9 ಜನರ ಕೊರೋನ ತಪಾಸಣೆ ನಡೆಸಲಾಗಿದೆ.
ಹೊಂಗಸಂದ್ರದಲ್ಲಿ ವಾಸವಾಗಿದ್ದ ವಲಸೆ ಕಾರ್ಮಿಕರಿಗೆ ಹಾಗೂ ಗುಜುರಿ ಅಂಗಡಿಯಿಂದ 30 ಜನರಿಗೆ ಸೋಂಕು ಪತ್ತೆಯಾಗಿದೆ. 419 ನೇ ಕಾರ್ಮಿಕನಿಗೆ ಸೋಂಕು ಪತ್ತೆಯಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಅಂಗಡಿ ಮಾಲಕ 10 ದಿನಗಳ ಬಳಿಕ ಲಾಲ್ ಬಾಗ್ ರಸ್ತೆಯಲ್ಲಿ ತಲೆತಿರುಗಿ ಬಿದ್ದಿದ್ದ. ತಲೆಸುತ್ತಿನ ಪರೀಕ್ಷೆಗೆ ಮದೀನಾ ನಗರದ ಕ್ಲಿನಿಕ್‍ಗೆ ತೆರಳಿದ್ದ ಈ ವ್ಯಕ್ತಿಯಲ್ಲಿ ತೀವ್ರಜ್ವರ ಇದ್ದ ಹಿನ್ನಲೆ ರಾಜೀವ್‍ಗಾಂಧಿ ಆಸ್ಪತ್ರೆಗೆ ಸೇರಿಸಿ ಕೊರೋನ ಪರೀಕ್ಷೆ ನಡೆಸಿದ್ದಾಗ ಕೊರೋನ ಸೋಂಕು ದೃಢಪಟ್ಟಿದೆ. ಆತ ನಗರದ ಹಲವೆಡೆ ಓಡಾಟ ನಡೆಸಿದ್ದಾನೆ ಎನ್ನಲಾಗಿದೆ.
ನಗರದಲ್ಲಿ ಕೊರೋನ ಸಂಖ್ಯೆ 155 ಏರಿಕೆ
ನಗರದಲ್ಲಿ ಇಲ್ಲಿಯವರಿಗೆ 155 ಕೊರೋನ ಪ್ರಕರಣ ಪತ್ತೆಯಾಗಿದೆ. ನಗರದಲ್ಲಿ 75 ಜನರು ಗುಣಮುಖರಾಗಿದ್ದು, 73 ಜನರಿಗೆ ಸಕ್ರಿಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟೂ 6,655 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿರುವ ಒಟ್ಟು 1,100 ಜನರು ಹಾಗೂ ಸೆಕೆಂಡರಿ ಸಂಪರ್ಕದಲ್ಲಿರುವ 4,788 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.







