ರೈತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘದಿಂದ ಸಿಎಂಗೆ ಪತ್ರ
ಬೆಂಗಳೂರು, ಮೇ 6: ಕೊರೋನ ಲಾಕ್‍ಡೌನ್‍ನಿಂದಾಗಿ ನಮ್ಮ ಆರ್ಥಿಕತೆಯ ಭಾಗವಾಗಿ ಗ್ರಾಮೀಣ ಜನರ ಆರ್ಥಿಕತೆ ಸಂಪೂರ್ಣವಾಗಿ ನೆಲಕಚ್ಚಿದೆ. ಹೀಗಾಗಿ, ಸರಕಾರ ರೈತರ ಸಂಕಷ್ಟಗಳನ್ನು ಮನಗಂಡು ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಕರ್ನಾಟಕ ಪ್ರಾಂತರೈತ ಸಂಘದಿಂದ ಮುಖ್ಯಮಂತ್ರಿಗೆ ಪತ್ರವನ್ನು ಬರೆಯಲಾಗಿದೆ.
ಗ್ರಾಮೀಣ ಆರ್ಥಿಕತೆಯು ಸಂಪೂರ್ಣವಾಗಿ ನೆಲಕಚ್ಚಿದೆ. ಇದನ್ನು ಪುನರ್‍ಚೇತನಗೊಳಿಸಲು ಸಾಕಷ್ಟು ಸಮಯವೇ ಬೇಕಾಗುತ್ತದೆ. ರಾಜ್ಯದಲ್ಲಿ ಕೆಲವು ಪ್ರದೇಶಗಳಲ್ಲಿ ಮಳೆ ಶುರುವಾಗಿದೆ. ಈ ಸಾಲಿನ ಮುಂಗಾರು ಉತ್ತಮವಾಗಿರಲಿದೆ ಎಂಬ ವರದಿಗಳು ಬರುತ್ತಿವೆ. ಆದರೆ ಕೃಷಿಯನ್ನೇ ನಂಬಿ ಬದುಕನ್ನು ಸಾಗಿಸುವ ರೈತರು, ಕೃಷಿ ಕೂಲಿಕಾರರು ಹಾಗು ಗ್ರಾಮೀಣ ಕಸುಬುದಾರರು ತುಂಬಾ ಚಿಂತಾಕ್ರಾಂತರಾಗಿದ್ದಾರೆ. ಸದ್ಯ ಇರುವ ಬೆಳೆ ಮಾರಾಟವಾಗದೇ ರೈತರ ಸಾಲದ ಹೊರೆ ಹೆಚ್ಚಾಗುತ್ತಿದೆ.
ಕೂಲಿಕಾರರಿಗೆ ಕೆಲಸವಿಲ್ಲ. ಇದರ ಫಲವಾಗಿ ಕಸುಬುದಾರನೂ ಅನಾಥ. ಗ್ರಾಮೀಣ ಪ್ರದೇಶದ ದೊಡ್ಡ ಸಂಖ್ಯೆಯ ಕುಟುಂಬಗಳು, ನಗರಗಳಲ್ಲಿ ತಮ್ಮ ಕುಟುಂಬದ ಸದಸ್ಯರು ಸಂಪಾದನೆ ಮಾಡುವ ಕೂಲಿ ಇಲ್ಲವೇ ಸಂಬಳಗಳಿಂದ ಬರುವ ಅದಾಯವನ್ನೇ ನೆಚ್ಚಿ ಜೀವನ ಮಾಡುವವರು ಇದ್ದಾರೆ. ಈಗ ನಗರದಿಂದ ಬರುವ ಅದಾಯವೂ ಇಲ್ಲ, ಕೂಲಿಯ ಕೆಲಸವೂ ಇಲ್ಲ, ಸಾಲದ ಹೊರೆ ಹೆಚ್ಚಳವಾಗಿ, ಮುಂದಿನ ಜೀವನ ಹೇಗೆ ಎಂಬುದೇ ಬೃಹತ್ ಸಮಸ್ಯೆಯಾಗಿ ಗ್ರಾಮೀಣ ಜನತೆಯನ್ನು ಕಾಡುತ್ತಿದೆ.
ಬೇಡಿಕೆಗಳು:
- ಬಡತನ, ನಿರುದ್ಯೋಗ, ಹಸಿವು ತಾಂಡವಾಡುತ್ತಿರುವ ಈ ಸಂದರ್ಭದಲ್ಲಿಯಾದರೂ ಯಥೇಚ್ಚವಾಗಿ ಗೋದಾಮುಗಳಲ್ಲಿ ಇರುವ ಆಹಾರ ಪದಾರ್ಥಗಳನ್ನು ಬಿ.ಪಿ.ಎಲ್, ಎ.ಪಿ.ಎಲ್. ಎನ್ನುವ ತಾರತಮ್ಯವಿಲ್ಲದೆ ಕನಿಷ್ಟ ಒಂದು ವರ್ಷ ಮಾಸಿಕ ಪ್ರತಿಕುಟುಂಬದ ತಲಾ ವ್ಯಕ್ತಿಗೆ 15 ಕೆ.ಜಿ. ರೇಷನ್‍ನ್ನು ನೀಡಬೇಕು. ಅಕ್ಕಿಯ ಜೊತೆಗೆ ಬೇಳೆ, ಎಣ್ಣೆ, ಸಕ್ಕರೆ, ಉಪ್ಪು ಇತ್ಯಾದಿ ಅವಶ್ಯ 16 ಸಾಮಗ್ರಿಗಳನ್ನು ನೀಡಬೇಕು.
- ಸೋಪು, ಸ್ಯಾನಿಟೈಸರ್, ಮಾಸ್ಕ್, ಹಾಗೂ ಮಹಿಳೆಯರ ನ್ಯಾಪ್ಕಿನ್. ಪ್ಯಾಡ್‍ಗಳನ್ನು ಒದಗಿಸಬೇಕು ಮಾತ್ರವಲ್ಲ, ಇವರು ಹಾಗೂ ಜನ್‍ಧನ್ ಖಾತೆಯ ಎಲ್ಲರಿಗೂ ಮಾಸಿಕ 7,500 ರೂಗಳಂತೆ ಕನಿಷ್ಟ ಆರು ತಿಂಗಳು ಅವರ ಬ್ಯಾಂಕ್ ಖಾತೆಗೆ ಹಾಕಬೇಕು.
- ಭತ್ತ, ತೊಗರಿ, ಹತ್ತಿ, ಮೆಣಸಿನಕಾಯಿ, ಗೋವಿನ ಜೋಳ, ಶೇಂಗಾ, ಮತ್ತಿತರೆ ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆಗೆ ಖರೀದಿಸಬೇಕು. ಡಾ. ಎಂ.ಎಸ್. ಸ್ವಾಮಿನಾಥನ್ ಸಲಹೆಯಂತೆ ಉತ್ಪಾದನಾ ವೆಚ್ಚಕ್ಕೆ ಶೇ 50 ಲಾಭಾಂಶ ಸೇರಿಸಿ ನಿಗದಿಸಿದ ಬೆಂಬಲ ಬೆಲೆಯ ಆಧಾರದಲ್ಲಿ ಕೃಷಿ ಉತ್ಪನ್ನಗಳನ್ನು ಸರಕಾರವೇ ಖರೀದಿ ಮಾಡಬೇಕು. ಅಗತ್ಯವಿರುವ ಕಡೆ ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು.
- ತರಕಾರಿ, ಹಣ್ಣು ಇತ್ಯಾದಿ ಕೃಷಿ ಉತ್ಪನ್ನಗಳಿಗೆ ಟೋಲ್ ಪ್ರೀ, ಉಚಿತ ಸಾಗಾಣಿಕೆ ವೆಚ್ಚ ಹಾಗೂ ಮಾರುಕಟ್ಟೆ ಶುಲ್ಕ ವಿನಾಯಿತಿ ನೀಡಬೇಕು. ಬೆಂಬಲ ಬೆಲೆಗಿಂತ ಕಡಿಮೆ ಮಾರಾಟವಾದಲ್ಲಿ ಅದರ ವ್ಯತ್ಯಾಸವನ್ನು ನೀಡಬೇಕು. ರಾಜ್ಯದ ಕೃಷಿ ಮಾರುಕಟ್ಟೆಗಳಿಗೆ ರೈತರು ತರುತ್ತಿರುವ ತರಕಾರಿ, ಹಣ್ಣು ಇತ್ಯಾದಿ ಕೃಷಿ ಉತ್ಪನ್ನಗಳನ್ನು ಸಾಗಿಸುವ ವಾಹನಗಳಿಗೆ ಟೋಲ್ ಶುಲ್ಕ, ಮಾರುಕಟ್ಟೆ ಶುಲ್ಕಗಳಿಂದ ವಿನಾಯಿತಿ ನೀಡಬೇಕು. ಬೆಲೆ ಕುಸಿತದಿಂದ ದಿಕ್ಕೆಟ್ಟಿರುವ ರೈತನ ಮಾರುಕಟ್ಟೆಯ ಸಾಗಾಣಿಕೆ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸಬೇಕು. ಅದೇರೀತಿ, ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟವಾದಲ್ಲಿ ಅದರ ವ್ಯತ್ಯಾಸದ ಮೌಲ್ಯವನ್ನು ಸರಕಾರ ನೀಡಬೇಕು.
- ಎಲ್ಲಾ ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಕಸುಬುದಾರರ ಕುಟುಂಬಗಳಿಗೆ ಕನಿಷ್ಟ 10,000 ರೂ. ನೆರವು ನೀಡಬೇಕು.
- ಸಂಕಷ್ಟದಲ್ಲಿರುವ ರೈತ, ತನ್ನ ಮುಂದಿನ ಕೃಷಿಯನ್ನು ನಡೆಸಲು ಸಹಾಯವಾಗಲು ಪ್ರತಿಕುಟುಂಬಕ್ಕೆ ಕನಿಷ್ಟ 10,000 ರೂ. ಗಳ ನೆರವು ನೀಡಬೇಕು. ಇದೇ ರೀತಿ ಗುತ್ತಿಗೆ ಕೃಷಿಯಲ್ಲಿ ತೊಡಗಿದ ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಕಸುಬುದಾರರಿಗೂ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಖ್ಯಮಂತ್ರಿಯ ಮುಂದಿಟ್ಟಿದ್ದಾರೆ.







