ಹೊಟೇಲ್, ರೆಸ್ಟೋರೆಂಟ್‍ಗಳಿಂದ ಪಾರ್ಸಲ್ ಗೆ ಮಾತ್ರ ಅವಕಾಶ: ಸರಕಾರದ ಮುಖ್ಯ ಕಾರ್ಯದರ್ಶಿ ಸ್ಪಷ್ಟನೆ

ಬೆಂಗಳೂರು, ಮೇ 6: ಹೊಟೇಲ್ ಮತ್ತು ರೆಸ್ಟೋರೆಂಟ್‍ಗಳ ಅಡುಗೆ ಮನೆಗಳಲ್ಲಿ ಸಿದ್ಧಪಡಿಸಿದ ಆಹಾರವನ್ನು ಪಾರ್ಸಲ್ ಮತ್ತು ಮನೆಗೆ ವಿತರಣೆಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಸ್ಪಷ್ಟನೆ ನೀಡಿದ್ದಾರೆ.
ಬುಧವಾರ ಈ ಸಂಬಂಧ ಸ್ಪಷ್ಟನೆ ನೀಡಿದ್ದು, ಎಲ್ಲ ವಲಯಗಳಲ್ಲಿ ಅನುಮತಿಸಲಾದ ಚಟುವಟಿಕೆಗಳು ಪ್ರಾರಂಭವಾದಂತೆ ಕಾರ್ಮಿಕರಿಗೆ ಹಾಗೂ ಸಿಲುಕಿಕೊಂಡಿರುವ ವ್ಯಕ್ತಿಗಳಿಗೆ ಆಹಾರದ ಬೇಡಿಕೆ ಹೆಚ್ಚುತ್ತಿದೆ. ವಸತಿ, ಆರೋಗ್ಯ, ಪೊಲೀಸ್, ಸರಕಾರಿ ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತರು ಸೇರಿ ಸಿಲುಕಿ ಕೊಂಡಿರುವ ಪ್ರವಾಸಿಗರು ಕ್ವಾರಂಟೈನ್‍ನಲ್ಲಿರುವ ವ್ಯಕ್ತಿಗಳಿಗೆ ಹೊಟೇಲ್ ಮತ್ತು ರೆಸ್ಟೋರೆಂಟ್ ಮೂಲಕ ಆಹಾರ ಒದಗಿಸುತ್ತಿರುವುದನ್ನು ಹೊರತುಪಡಿಸಿ ಇತರೆ ಎಲ್ಲ ಹೊಟೇಲ್ ಮತ್ತು ರೆಸ್ಟೋರೆಂಟ್‍ಗಳ ಸೇವೆಯನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.
ಹೊಟೇಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಪಾರ್ಸಲ್ ಮತ್ತು ಮನೆಗೆ ವಿತರಣೆ ಮಾಡಲು ಆಹಾರ ಸಿದ್ಧಪಡಿಸುವ ವೇಳೆ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಅಲ್ಲದೆ, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೊರೋನ ಸೋಂಕು ತಡೆಗಟ್ಟಲು ಸೂಚಿಸಿರುವ ಎಲ್ಲ ನಿರ್ದೇಶನಗಳನ್ನು ಅನುರಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.





