ಮೂರು ತಿಂಗಳ ವಿದ್ಯುತ್ ಶುಲ್ಕ ಮನ್ನಾ ಮಾಡುವಂತೆ ಎಸ್ಡಿಪಿಐ ಒತ್ತಾಯ

ಇಲ್ಯಾಸ್ ಮುಹಮ್ಮದ್ ತುಂಬೆ
ಬೆಂಗಳೂರು, ಮೇ 6: ಕಳೆದ ಒಂದೂವರೆ ತಿಂಗಳಿಗಿಂತಲೂ ಹೆಚ್ಚು ಕಾಲ ರಾಜ್ಯಾದ್ಯಂತ ಲಾಕ್ಡೌನ್ನಿಂದಾಗಿ ಜನತೆ ಯಾವುದೆ ಆರ್ಥಿಕ ಸಂಪಾದನೆ ಇಲ್ಲದೆ ತೀರಾ ಕಷ್ಟಕರ ಪರಿಸ್ಥಿತಿಯಲ್ಲಿರುವುದನ್ನು ಸರಕಾರ ಚೆನ್ನಾಗಿ ಅರಿತಿದೆ. ಕಾರ್ಮಿಕರು, ರೈತರು ಹಾಗೂ ಮಧ್ಯಮ ವರ್ಗದ ಜನತೆ ಅತ್ಯಂತ ಹೆಚ್ಚಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದ್ದಾರೆ.
ಇಂತಹ ಸಮಯದಲ್ಲಿ ರಾಜ್ಯ ಸರಕಾರ ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳ ವಿದ್ಯುಚ್ಛಕ್ತಿ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡಬೇಕು. ಲಾಕ್ಡೌನ್ ತೆರವುಗೊಂಡ ನಂತರವೂ ಜನರ ಆರ್ಥಿಕತೆ ಒಂದು ಹದಕ್ಕೆ ಬರಲು ಸಾಕಷ್ಟು ಸಮಯ ಹಿಡಿಯುವುದರಿಂದ ಯಾವ ಕಾರಣಕ್ಕೂ ಈ ಮೂರು ತಿಂಗಳಿನ ವಿದ್ಯುತ್ ಶುಲ್ಕವನ್ನು ಸರಕಾರ ವಸೂಲಿ ಮಾಡಬಾರದು ಎಂದು ಅವರು ಆಗ್ರಹಿಸಿದ್ದಾರೆ.
ವಸೂಲಿ ಮಾಡಿದರೆ ಅದು ಜನತೆಯ ಮೇಲೆ ಸರಕಾರ ಹೇರುವ ಬಹುದೊಡ್ಡ ಅನ್ಯಾಯವಾಗಿದೆ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





