ನಾಲ್ಕು ದಿನಗಳಲ್ಲಿ ಒಂದು ಲಕ್ಷ ಜನರ ಸ್ಥಳಾಂತರ: ಸಚಿವ ಲಕ್ಷ್ಮಣ ಸವದಿ

ಬೆಂಗಳೂರು, ಮೇ 6: ನಾಲ್ಕು ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಮೂರೂವರೆ ಸಾವಿರ ಬಸ್‍ಗಳಲ್ಲಿ ಒಂದು ಲಕ್ಷ ಜನರನ್ನು ಕಳುಹಿಸಿಕೊಡಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಈ ವೇಳೆ ಭಯಪಡದೇ ಸಾರಿಗೆ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಜೀವದ ಭಯವನ್ನು ತೊರೆದು ವೈದ್ಯರು, ಆಶಾ ಕಾರ್ಯಕರ್ತೆಯರು, ಸಾರಿಗೆ ಸಿಬ್ಬಂದಿಗಳು ಕೆಲಸ ಮಾಡಿದ್ದಾರೆ. ಅಂತಹ ಸಿಬ್ಬಂದಿಗಳಿಗೆ ಹಾಗೂ ಆ ತಂಡಕ್ಕೆ ಅಭಿನಂದನೆ ಸಲ್ಲಿಸುವ ಕೆಲಸವನ್ನು ಸರಕಾರದ ವತಿಯಿಂದ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ನಾಳೆ ಕೊನೆಯ ದಿನ ಉಚಿತವಾಗಿ ಕಾರ್ಮಿಕರನ್ನು ಅವರ ಊರುಗಳಿಗೆ ಕಳಿಸುವ ಕೆಲಸ ಮಾಡುತ್ತಿದ್ದೇವೆ. ಸಂಘಸಂಸ್ಥೆಗಳು ಬ್ರೆಡ್ ಹಾಗೂ ಆಹಾರಗಳನ್ನಾ ಕೂಡ ಸಾಕಷ್ಟು ಜನರಿಗೆ ಕೊಟ್ಟಿದ್ದು, ಅವರಿಗೂ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ. ಮಾಧ್ಯಮ ಮಿತ್ರರು ಕೂಡ ನಮ್ಮ ತಪ್ಪುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಸಾರಿಗೆ ಸಿಬ್ಬಂದಿಗೆ ಸಂಬಳವಾಗದ ವಿಚಾರ: ಸಾರಿಗೆ ಇಲಾಖೆಯ ಸಿಬ್ಬಂದಿಗಳು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ನಾನು ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದೇನೆ. ನೇರವಾಗಿ ಸರಕಾರದಿಂದ 326 ಕೋಟಿ ರೂಪಾಯಿಯನ್ನು ಪಡೆದುಕೊಂಡು ಸಂಬಳ ಕೊಡುವ ಕೆಲಸ ಮಾಡುತ್ತೇವೆ. ಮೂರು ನಾಲ್ಕು ದಿನಗಳಲ್ಲಿ ನೌಕರರ ಅವರ ಅಕೌಂಟಿಗೆ ಹಣ ತಲುಪಲಿದೆ ಎಂದು ತಿಳಿಸಿದ್ದಾರೆ.







