ನೌಕರರ ತುಟ್ಟಿಭತ್ತೆ ಸ್ಥಗಿತಗೊಳಿಸುವ ಆದೇಶ ಹಿಂಪಡೆಯಿರಿ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯ
ಬೆಂಗಳೂರು, ಮೇ 6: ಶಿಕ್ಷಕರನ್ನು ಒಳಗೊಂಡಂತೆ ರಾಜ್ಯ ಸರಕಾರಿ ನೌಕರರ 2020ರ ಜನವರಿಯಿಂದ 2021ರ ಜನವರಿವರೆಗೆ ಒಟ್ಟು 3ಹಂತದ ತುಟ್ಟಿಭತ್ತೆ ದರಗಳನ್ನು ಸ್ಥಗಿತಗೊಳಿಸಿರುವುದನ್ನು ಪುನರ್‍ಪರಿಶೀಲಿಸಿ ಸದರಿ ಆದೇಶವನ್ನು ರಾಜ್ಯ ಸರಕಾರ ಹಿಂಪಡೆಯಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಕೊರೋನ ಸೋಂಕು ನಿಯಂತ್ರಿಸುವಲ್ಲಿ ಎಲ್ಲ ಇಲಾಖೆಗಳ ಸರಕಾರಿ ನೌಕರರು ಶ್ರಮಿಸುತ್ತಿದ್ದಾರೆ. ಪ್ರತಿ ಮನೆಗಳ ಸರ್ವೇ ಹಾಗೂ ಇನ್ನಿತರ ಕೆಲಸಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದಾಗ್ಯು ನಮ್ಮ ಸೇವೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ರೀತಿಯಲ್ಲಿ 3 ಹಂತದ ತುಟ್ಟಿಭತ್ತೆಗಳನ್ನು ತಡೆಹಿಡಿದಿರುವ ಆದೇಶ ನೌಕರರಿಗೆ ಸಾಕಷ್ಟು ನಷ್ಟವನ್ನು ಉಂಟು ಮಾಡುತ್ತದೆ.
ಶಿಕ್ಷಕರು ಒಳಗೊಂಡಂತೆ ಸರಕಾರಿ ನೌಕರರು ಕೊಡಗು ಪರಿಹಾರ ನಿಧಿಗೆ ಒಂದು ದಿನದ ವೇತನವನ್ನು, ಉತ್ತರ ಕರ್ನಾಟಕದ ನೆರೆ ಹಾವಳಿಯಾದಾಗ ಒಂದು ದಿನದ ವೇತನವನ್ನು ನೀಡಿದ್ದಾರೆ. ಹಾಗೂ ಕೊರೋನ ನಿಯಂತ್ರಣಕ್ಕಾಗಿ ಸರಕಾರ ಕೇಳುವ ಮುನ್ನವೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ದಿನದ ವೇತನವನ್ನು ಸ್ವಇಚ್ಛೆಯಿಂದ ನೀಡಿದ್ದೇವೆ. ಇದರ ಜತೆಗೆ ಕೊರೋನ ನಿಯಂತ್ರಿಸುವ ನಿಟ್ಟಿನ ಕಾರ್ಯದಲ್ಲಿ ಆರೋಗ್ಯ ಇಲಾಖೆಯ ಜೊತೆ ಕೈ ಜೋಡಿಸಿದ್ದೇವೆ.
ಸರಕಾರದ ಎಲ್ಲ ಯೋಜನೆಗಳನ್ನು ಸಮಗ್ರವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕರ್ತವ್ಯನಿರತರಾದ ಶಿಕ್ಷಕರ, ನೌಕರರ ಮೂರು ತುಟ್ಟಿಭತ್ತೆಗಳನ್ನು ಕಡಿತಗೊಳಿಸುವ ನಿರ್ಧಾರವನ್ನು ಮುಖ್ಯಮಂತ್ರಿಗಳು ಪುನರ್ ಪರಿಶೀಲಿಸಬೇಕೆಂದು ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.







