ಕಾರ್ಮಿಕರಲ್ಲಿ ತೀವ್ರ ಜ್ವರ: 50ಕ್ಕೂ ಅಧಿಕ ಜನರ ಮೇಲೆ ನಿಗಾ
ಬೆಂಗಳೂರು, ಮೇ 6: ನೆಲಮಂಗಲ ಸಮೀಪ ಮಾದವಾರದಲ್ಲಿ ಬೀಡುಬಿಟ್ಟಿದ್ದ ಕಾರ್ಮಿಕರ ಪೈಕಿ ಸುಮಾರು 11 ಮಂದಿಯಲ್ಲಿ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 50ಕ್ಕೂ ಅಧಿಕ ಜನರ ಮೇಲೆ ನಿಗಾ ಇರಿಸಲಾಗಿದೆ. ಈ ಮೂಲಕ ಎರಡನೇ ಹಂತದ ಮಹಾ ವಲಸೆ ಮತ್ತೊಂದು ಆತಂಕ ಸೃಷ್ಟಿಸಿದೆ.
ತಮ್ಮ ರಾಜ್ಯಗಳಿಗೆ ತೆರಳಲು ರೈಲಿನ ವ್ಯವಸ್ಥೆ ಕಲ್ಪಿಸುವಂತೆ ಸಾವಿರಾರು ಕಾರ್ಮಿಕರು ಮಾದವಾರದಲ್ಲಿ ಸೋಮವಾರ ಪ್ರತಿಭಟನೆಗೆ ಮುಂದಾಗಿದ್ದರು. ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ಅಲ್ಲೇ ಉಳಿದುಕೊಂಡಿದ್ದರು. ಅವರನ್ನು ಕೆ.ಆರ್. ಮಾರುಕಟ್ಟೆಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆದಿತ್ತು. ಈ ಸಂದರ್ಭ ಥರ್ಮಲ್ ಸ್ಕ್ರೀನಿಂಗ್ ವೇಳೆ 11 ಮಂದಿಗೆ ತೀವ್ರ ಜ್ವರ ಕಂಡುಬಂದಿದ್ದು, ಇವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ಹೇಳಿವೆ.
ವಿಷಯ ತಿಳಿಯುತ್ತಿದ್ದಂತೆ ಜ್ವರಪೀಡಿತರು ಮತ್ತು ಅವರೊಂದಿಗೆ ಈ ಹಿಂದೆ ವಾಸವಿದ್ದವರ ಸಹಿತ ಸುಮಾರು 50ಕ್ಕೂ ಹೆಚ್ಚು ಜನರ ಮೇಲೆ ನಿಗಾ ಇರಿಸಲಾಗಿದೆ. ಗಂಟಲು ದ್ರವ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸುವ ಸಿದ್ಧತೆ ನಡೆದಿದೆ. ವರದಿ ಬಂದ ಅನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





