ಪುತ್ತೂರು: ಕಳವು ಆರೋಪಿ ಬಂಧನ; ಸೊತ್ತು ವಶ

ಪುತ್ತೂರು, ಮೇ 7: ಲಾಕ್‌ಡೌನ್ ಸಂದರ್ಭದಲ್ಲಿ ಮನಯೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಹಾಗೂ ಅಂಗಡಿಯೊಂದರಿಂದ ಮೂರು ತೂಕದ ಯಂತ್ರಗಳನ್ನು ಕಳವುಗೈದ ಆರೋಪಿಯೋರ್ವನನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
ಲತಃ ಕೊಡಗು ಜಿಲ್ಲೆಯ ಕುಶಾಲ ನಗರ ನಿವಾಸಿ ರೋಶನ್ ಯಾನೆ ನೌಫಲ್(20) ಬಂಧಿತ ಆರೋಪಿ. ಈತನಿಂದ ಒಂದು ಲಕ್ಷ ರೂ.ಗೂ ಅಧಿಕ ವೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪುತ್ತೂರು ನಗರದ ಹೊರವಲಯದ ಬೆದ್ರಾಳ ಎಂಬಲ್ಲಿರುವ ತನ್ನ ಚಿಕ್ಕಮ್ಮನ ಮನೆಯಲ್ಲಿ ಉಳಿದುಕೊಂಡಿದ್ದ ಆರೋಪಿ ರೋಶನ್, ಮೇ 4ರಂದು ಕೆಮ್ಮಿಂಜೆ ಗ್ರಾಮದ ಸಂಜಯನಗರ ಎಂಬಲ್ಲಿ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್ ಕಳವು ಮಾಡಿದ್ದಲ್ಲದೆ, ಬಳಿಕ ಆರ್ಯಾಪು ಗ್ರಾಮದ ಮುಕ್ರಂಪಾಡಿ ಎಂಬಲ್ಲಿ ತರಕಾರಿ ಅಂಗಡಿಯೊಂದರಿಂದ 3 ತೂಕದ ಯಂತ್ರವನ್ನು ಕಳವು ನಡೆಸಿರುವುದಾಗಿ ಆರೋಪಿಸಲಾಗಿದೆ. ಎರಡು ಪ್ರಕರಣಗಳಿಗೆ ಸಂಬಂಧಿಸಿ ದೂರು ದಾಖಲಿಸಿಕೊಂಡಿರುವ ನಗರ ಠಾಣಾ ಪೊಲೀಸರು ಆರೋಪಿಯನ್ನು ಬೆದ್ರಾಳದಲ್ಲಿ ಬಂಧಿಸಿದ್ದಾರೆ. ಕಳವಾಗಿರುವ ಬೈಕಿನ ವೌಲ್ಯ ರೂ. 90 ಸಾವಿರ ಮತ್ತು ತೂಕದ ಯಂತ್ರಗಳ ವೌಲ್ಯ ರೂ. 19 ಸಾವಿರ ಎಂದು ಅಂದಾಜಿಸಲಾಗಿದೆ.





