ಉಡುಪಿ: ಮೀನುಗಾರರರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆಗೆ ಮನವಿ
ಉಡುಪಿ, ಮೇ 7: ಕೊರೋನದಿಂದ ಉಂಟಾಗಿರುವ ಲಾಕ್‌ಡೌನ್‌ನಿಂದಾಗಿ ಕರಾವಳಿ ಕರ್ನಾಟದ ಮೂರು ಜಿಲ್ಲೆಗಳಲ್ಲಿ ಮೀನು ಗಾರಿಕೆ ಸ್ಥಗಿತಗೊಂಡು ತೀರ ಸಂಕಷ್ಟಕ್ಕೀಡಾಗಿದ್ದು, ಈ ಸಂದರ್ಭದಲ್ಲಿ ರಾಜ್ಯ ಸರಕಾರ ಮೀನುಗಾರರಿಗೆ ಗರಿಷ್ಟ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸ ಬೇಕು ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಮನವಿ ಮಾಡಿದ್ದಾರೆ.
ಮೀನುಗಾರಿಕಾ ಋತುವಿನ ಆರಂಭದಲ್ಲಿಯೇ ಜಿಎಸ್‌ಟಿ, ಹವಾಮಾನ ವೈಪರಿತ್ಯದ ಸಮಸ್ಯೆಯಿಂದ ಸುಮಾರು 2 ತಿಂಗಳು ಮೀನುಗಾರಿಕೆ ಹಿನ್ನಡೆ ಅನುಭವಿಸಿದ್ದು, ಆ ಬಳಿಕ ಮತ್ಸಕ್ಷಾಮದಿಂದಾಗಿಯೂ ನಷ್ಟ ಹೊಂದಿತ್ತು. ಕೊರೋನ ಪರಿಣಾಮದಿಂದ ಮಾ.20ರಿಂದ ಮೀನುಗಾರಿಕೆ ಸ್ಥಗಿತಗೊಳಿಸಿದ್ದು ಇದೇ ಪರಿಸ್ಥಿತಿ ಮುಂದುವರಿದರೆ ಜೂನ್ ತಿಂಗಳಿನಿಂದ ಆಗಸ್ಟ್‌ವರೆಗೆ ಮೀನು ಗಾರಿಕೆ ನಿಷೇಧವಿರುತ್ತದೆ. ಒಟ್ಟಾರೆ ಕರಾವಳಿ ಜಿಲ್ಲೆಯಲ್ಲಿ ಸುಮಾರು 5 ತಿಂಗಳು ಮೀನುಗಾರಿಕೆ ಸಂಪೂರ್ಣ ಸ್ಥಬ್ದಗೊಳ್ಳಲಿದ್ದು ಸುಮಾರು 1000 ಕೋಟಿ ನಷ್ಟ ಅನುಭವಿಸಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶುಕ್ರವಾರ 9 ಬಸ್‌ಗಳಲ್ಲಿ ಪ್ರಯಾಣ
ಜಿಲ್ಲೆಯ 3 ಬಂದರುಗಳಲ್ಲಿರುವ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮೀನುಗಾರಿಕಾ ಬೋಟುಗಳ ಕಾರ್ಮಿಕರನ್ನು ಜಿಲ್ಲಾಡಳಿತದ ಸೂಚನೆ ಯಂತೆ ಮೇ 8ರಂದು ಒಟ್ಟು 9 ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕರೆದು ಕೊಂಡು ಹೋಗಲಾಗುವುದು. ಒಂದೊಂದು ಬಸ್‌ಗಳಲ್ಲಿ 30 ಮಂದಿ ಪ್ರಯಾಣ ಮಾಡಲಿದ್ದಾರೆ ಎಂದು ಉಡುಪಿ ಕೆಎಸ್‌ಆರ್‌ಟಿಸಿ ಡಿಪೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.





