ಬಟ್ಟೆ ಅಂಗಡಿಗಳನ್ನು ತೆರೆಯಲು ಅನುಮತಿ: ದ.ಕ.ಜಿಲ್ಲೆಯ ವಿವಿಧ ಸಂಘಟನೆಗಳ ಖಂಡನೆ
ಮಂಗಳೂರು, ಮೇ 7: ದ.ಕ.ಜಿಲ್ಲೆಯಲ್ಲಿ ಪ್ರತಿ ದಿನವೂ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಮತ್ತು ಜಿಲ್ಲಾಡಳಿತವು ಬಟ್ಟೆ, ಫ್ಯಾನ್ಸಿ ಹಾಗೂ ಪಾದರಕ್ಷೆಗಳ ಅಂಗಡಿಗಳನ್ನು ತೆರೆಯಲು ಅವಕಾಶ ಕೊಟ್ಟಿರುವುದು ಖಂಡನೀಯ ಎಂದು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈದುಲ್ ಫಿತ್ರ್ ಹಬ್ಬ ಸಮೀಪಿಸುತ್ತಿರುವ ವೇಳೆ ಈ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ಕೊಟ್ಟರೆ ಜನಸಂದಣಿಯನ್ನು ನಿಯಂತ್ರಿಸು ವುದು ಕಷ್ಟವಾಗಬಹುದು. ಜನಸಂದಣಿಯಿಂದ ಕೊರೋನ ಸೋಂಕು ಹರಡುವ ಭೀತಿ ಇದೆ. ಆದುದರಿಂದ ಬಟ್ಟೆ, ಫ್ಯಾನ್ಸಿ ಮತ್ತು ಪಾದರಕ್ಷೆಯ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡಬಾರದು ಎಂದು ವಿವಿಧ ಮುಸ್ಲಿಂ ಸಂಘಟನೆಗಳು ಮತ್ತು ಉಡುಪಿ ಖಾಝಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಕೂಡ ಅದಕ್ಕೆ ಸ್ಪಂದಿಸದೆ ಅನುಮತಿ ನೀಡಿರುವುದು ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಜಿಲ್ಲಾಡಳಿತದ ಈ ಅಚಾತುರ್ಯದಿಂದ ಕೊರೋನ ಹರಡಿದರೆ ಇದರ ಸಂಪೂರ್ಣ ಹೊಣೆಯನ್ನು ಇಲ್ಲಿನ ಸಂಸದರು, ಉಸ್ತುವಾರಿ ಸಚಿವರು, ಶಾಸಕರು ಮತ್ತು ಜಿಲ್ಲಾಡಳಿತ ಹೊರಬೇಕಾಗಿದೆ. ಇದರೊಂದಿಗೆ ಇಲ್ಲಿನ ಕೆಲವು ಮಾಧ್ಯಮಗಳು ಕೂಡ ಕೋಮು ವಿಷವನ್ನೇ ಕಾರುವುದರಲ್ಲಿ ಯಾವ ಸಂಶಯವೂ ಇಲ್ಲ. ಅಲ್ಲದೆ ಇಷ್ಟರವರೆಗಿನ ಲಾಕ್‌ಡೌನ್ ಕೂಡ ವ್ಯರ್ಥ ವಾಗಲಿದೆ ಎಂದು ಅಶ್ರಫ್ ತಿಳಿಸಿದ್ದಾರೆ.
ಕೊರೋನ ಸೋಂಕು ನಿಯಂತ್ರಣ ಕಾರ್ಯದಲ್ಲಿ ಮುಸ್ಲಿಂ ಸಮುದಾಯವು ಈವರೆಗೆ ಸರಕಾರದೊಂದಿಗೆ ಸಂಪೂರ್ಣ ಸಹಕಾರವನ್ನು ನೀಡಿದೆ. ಸರಕಾರದ ಎಲ್ಲಾ ಕ್ರಮಗಳಿಗೂ ಬದ್ಧವಾಗಿ ನಡೆದುಕೊಂಡಿದೆ. ಪವಿತ್ರ ರಮಝಾನ್‌ನಲ್ಲಿ ಮಸೀದಿಗಳಲ್ಲಿ ಜಮಾತ್ ಆಗಿ ನಿರ್ವಹಿಸುವ ನಮಾಝ್ ಳನ್ನು ಮನೆಯಲ್ಲಿಯೇ ನಿರ್ವಹಿಸಲಾಗಿದೆ. ಆದಾಗ್ಯೂ ಕೆಲವು ಬಟ್ಟೆ ವ್ಯಾಪಾರಿಗಳ ಒತ್ತಡಕ್ಕೆ ಮಣಿದು ಜವುಳಿ ಅಂಗಡಿಗಳನ್ನು ತೆರೆಯಲು ಅನುಮತಿ ಕೊಟ್ಟಿರುವುದು ಅಕ್ಷಮ್ಯ. ಜಿಲ್ಲಾಡಳಿತವು ತನ್ನ ನಿರ್ಧಾರವನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಂಗಳೂರು ಸೆಂಟ್ರಲ್ ಕಮಿಟಿ: ರಮಝಾನ್‌ನಲ್ಲಿ ಬಟ್ಟೆ ಅಂಗಡಿಗಳನ್ನು ತೆರೆಯುವುದು ಬೇಡ. ಅತ್ಯಂತ ಸರಳವಾಗಿಯೇ ಈದ್ ಹಬ್ಬ ಆಚರಿಸುವೆವು ಎಂದು ಮುಸ್ಲಿಂ ಸಮುದಾಯವು ಈಗಾಗಲೆ ಹೇಳಿಕೊಂಡಿವೆ. ಅದರಲ್ಲೂ ಗೌರವಾನ್ವಿತ ಖಾಝಿಗಳು ಕೂಡ ರಮಝಾನ್ ಮುಗಿಯುವವರೆಗೆ ಬಟ್ಟೆ ಅಂಗಡಿಗಳನ್ನು ತೆರೆಯುವುದು ಬೇಡ ಎಂದು ದ.ಕ.ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಆದರೂ ಜಿಲ್ಲಾಡಳಿತವು ಉದ್ದೇಶಪೂರ್ವಕವಾಗಿ ಬಟ್ಟೆ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟು ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಎಸಗಲು ಮುಂದಾಗಿದೆ. ಜಿಲ್ಲಾಡಳಿತದ, ಜಿಲ್ಲಾ ಉಸ್ತುವಾರಿ ಸಚಿವರ ಈ ನಡೆ ಖಂಡನೀಯ ಎಂದು ಮಂಗಳೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲಿ ಹಸನ್ ತಿಳಿಸಿದ್ದಾರೆ.
ಮುಸ್ಲಿಂ ಜಸ್ಟೀಸ್ ಫಾರಂ: ದ.ಕ.ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದ್ದರೂ ಕೂಡ ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಅದನ್ನು ಗಂಭೀರವಾಗಿ ಪರಿಗಣಿಸದೆ ಬಟ್ಟೆ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟು ಮುಸ್ಲಿಂ ಸಮುದಾಯಕ್ಕೆ ನೋವನ್ನುಂಟು ಮಾಡಿದ್ದಾರೆ. ಪ್ರಸಕ್ತ ಸನ್ನಿವೇಶದಲ್ಲಿ ಈ ಕೊರೋನ ರೋಗಕ್ಕೆ ಮನೆಯೇ ಔಷಧಿಯಾಗಿರುತ್ತದೆ. ಆದರೆ ಜಿಲ್ಲಾಡಳಿತವು ಪ್ರಭಾವಿಗಳ ಮಾತನ್ನು ಅಥವಾ ವ್ಯಾಪಾರಿಗಳ ಮನವಿಗೆ ಸ್ಪಂದಿಸಿ ಲಾಕ್‌ಡೌನ್‌ನಲ್ಲಿ ಸಡಿಲಿಕೆ ಮಾಡಿರುವುದು ಖಂಡನೀಯ ಎಂದು ಮುಸ್ಲಿಂ ಜಸ್ಟೀಸ್ ಫಾರಂ ಕಾರ್ಯದರ್ಶಿ ವಹಾಬ್ ಕುದ್ರೋಳಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.







