ಪುರಸಭೆ ಸದಸ್ಯರನ್ನು ಕಡೆಗಣಿಸುತ್ತಿರುವ ತಾಲೂಕಾಡಳಿತ: ಪುರಸಭೆ ಮಾಜಿ ಅಧ್ಯಕ್ಷ ಕಾಶಿಮಜಿ

ಭಟ್ಕಳ: ಕೋವಿಡ್-19 ಸಂಬಂಧ ಲಾಕ್‍ಡೌನ್ ಆಗಿ 45 ದಿನಗಳು ಕಳೆದಿದ್ದರೂ ಸಹ ಜನರಿಂದ ಆಯ್ಕೆಯಾದ ಪುರಸಭಾ ಸದಸ್ಯರನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಪುರಸಭಾ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಪರ್ವೇಝ್ ಕಾಶಿಮಜಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಅವರು ಗುರುವಾರ ಇಲ್ಲಿನ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ಪುರಸಭೆ ಹಾಗೂ ಜಾಲಿ ಪ.ಪಂ ಸದಸ್ಯರೊಂದಿಗೆ ಸಹಾಯಕ ಆಯುಕ್ತರು ನಡೆಸಿದ ಸಭೆಯಲ್ಲಿ ಮಾತನಾಡಿ ತಾಲೂಕಾಡಳಿತವನ್ನು ತರಾಟೆಗೆ ತೆಗೆದುಕೊಂಡರು.
ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿ ಅತ್ಯಧಿಕ ಪ್ರಕರಣಗಳು ಪತ್ತೆಯಾಗಿದ್ದರೂ ಸಹ ಯಾವುದೇ ಸಂದರ್ಭದಲ್ಲಿ ನಮಗೆ ಒಂದು ಮಾತನ್ನು ಕೇಳಿಲ್ಲ, ನಾವು ಜನತೆಗೆ ತಿಳಿಹೇಳುತ್ತೇವೆ ಎಂದರೂ ನಮಗೆ ಪಾಸ್ ನೀಡಿಲ್ಲ, ಈಗ ಸರ್ವೆ ಮಾಡಲು ಮಾಹಿತಿ ನೀಡುವಂತೆ ಹೇಳಿ ಎಂದರೆ ಜನರು ನಮ್ಮನ್ನು ಸುಮ್ಮನೆ ಬಿಡುತ್ತಾರೆಯೇ? ಇಷ್ಟು ದಿನ ಅವರ ಕಷ್ಟ ಸುಖವನ್ನು ವಿಚಾರಿಸದೇ ಈಗ ಮಾಹಿತಿ ಕೊಡಿ ಎನ್ನುವುದಕ್ಕೆ ಆಗುವುದಿಲ್ಲ ಎಂದ ಅವರು ತಮ್ಮನ್ನು ನಿರ್ಲಕ್ಷ ಮಾಡಿರುವುದಕ್ಕೆ ಕಾರಣ ನೀಡಬೇಕು ಎಂದು ಪಟ್ಟು ಹಿಡಿದರು.
ಭಟ್ಕಳದಲ್ಲಿ ಲಾಕ್‍ಡೌನ್ ಆದ ನಂತರ ಈವರೆಗೆ ಬೇರೆ ಬೇರೆ ಕಾರಣದಿಂದ 13 ಸಾವುಗಳು ಸಂಭವಿಸಿವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ 22 ಸಾವಾಗಿದೆ ಎಂತೆಲ್ಲಾ ಬರುತ್ತಿದೆ, ಇದಕ್ಕೆಲ್ಲಾ ನಾವು ಜನರಿಗೆ ಉತ್ತರ ಕೊಡಬೇಕಾಗುತ್ತದೆ. ಆಡಳಿತ ವತಿಯಿಂದ ಯಾವುದು ಸರಿ ಎನ್ನುವ ಬಗ್ಗೆ, ಯಾವುದೇ ಕಾರಣಕ್ಕೆ ಮೃತ ಪಟ್ಟರೂ ಸಹ ಸ್ವಾಬ್ ಪರೀಕ್ಷೆಯ ನಂತರವೇ ಅಂತ್ಯಕ್ರಿಯೆ ಮಾಡಬೇಕು ಎನ್ನುವ ಕುರಿತು, ಕನಿಷ್ಟ ಹಾಟ್‍ಸ್ಪಾಟ್ ಪ್ರದೇಶದ ಸದಸ್ಯರನ್ನೂ ಗಣನೆಗೆ ತೆಗೆದುಕೊಂಡಿಲ್ಲ ಯಾಕೆ ಎನ್ನುವ ಕುರಿತು ನಮಗೆ ಸ್ಪಷ್ಟೀಕರಣ ಬೇಕು ಎಂದೂ ಪಟ್ಟು ಹಿಡಿದರು. ನಮ್ಮನ್ನು ನಿರ್ಲಕ್ಷಿಸಿದ್ದರಿಂದ ನಮಗೆ ತುಂಬಾ ಬೇಸರವಾಗಿದೆ, ಅದನ್ನು ನಿಮ್ಮಲ್ಲಿ ತೋಡಿಕೊಂಡಿದ್ದೇವೆ ಇದಕ್ಕೆ ನೀವೇ ನಮಗೆ ಉತ್ತರ ಕೊಡಬೇಕು ಎಂದೂ ಹೇಳಿದರು.
ಇದಕ್ಕೆ ಉತ್ತರ ನೀಡಿದ ಸಹಾಯಕ ಕಮಿಷನರ್ ಭರತ್ ಎಸ್. ಅವರು ನಾವು ಪುರಸಭಾ ಸದಸ್ಯರಿಗೆ ಇಲ್ಲಿಯ ತನಕ ಪಾಸ್ ನೀಡಿಲ್ಲ, ಕಾರಣ ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್‍ನವರೂ ಬರುತ್ತಾರೆ, ಆಗ ರಸ್ತೆಯಲ್ಲಿ ವಾಹನ ಜನರೇ ಜಾಸ್ತಿಯಾಗುತ್ತಾರೆ. ಸಂಚಾರ ನಿಯಂತ್ರಣ ಕಷ್ಟವಾಗುತ್ತೆ ಎನ್ನುವ ಕಾರಣ ಅಷ್ಟೆ ಎಂದರು.
ನಂತರ ಮಾತನಾಡಿದ ನೋಡಲ್ ಅಧಿಕಾರಿ ಡಾ. ಶರದ್ ನಾಯಕ ಅವರು ಯಾವುದೇ ಕಾರಣಕ್ಕೂ ಪರೀಕ್ಷೆಗೊಳಪಡುವ ಎಲ್ಲರಿಗೂ ಕೋವಿಡ್-19 ಸೋಂಕಿದೆ ಎಂದರ್ಥವಲ್ಲ. ಮೃತರೂ ಕೂಡಾ ಹಾಗೆ ಮೃತಪಡುವಾಗ ಅವರಿಗೆ ಜ್ವತ, ತಂಡಿಯ ಲಕ್ಷಣವಿತ್ತೇ ಎಂದು ತಿಳಿದುಕೊಂಡು ಕೋವಿಡ್-19 ಪರೀಕ್ಷೆ ಮಾಡುತ್ತೇವೆ. ಕಾಯಿಲೆಯಿಂದ ಇಲ್ಲವೇ ವೃದ್ಧಾಪ್ಯದಿಂದ ಮೃತರಾದರೆ ಪರೀಕ್ಷೆ ಮಾಡುವ ಪ್ರಶ್ನೆಯೇ ಇಲ್ಲ. ಮಂಡದಲ್ಲಿ ಮುಂಬೈದ ಬಂದ ಮೃತ ದೇಹದಿಂದಾಗಿ ಎಲ್ಲಾ ಕಡೆಗಳಲ್ಲಿಯೂ ಬಿಗು ನಿಲುವು ತಳೆಯುವುದು ಅನಿವಾರ್ಯವಾಗಿದೆ ಎಂದರು. ಪ್ರಸ್ತುತ ಬೆಂಗಳೂರಿನಿಂದ ಬಂದ 42 ಜನರನ್ನು, ಗೋವಾದಿಂದ 11, ಹೈದರಾಬಾದಿನಿಂದ 18 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಗ್ರಾಮೀಣ ಭಾಗದವರನ್ನು ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ ಎಂದರು.
ಸಿ.ಪಿ.ಐ. ರಾಮಚಂದ್ರ ನಾಯಕ ಹಾಗೂ ಸಬ್ ಇನ್ಸಪೆಕ್ಟರ್ ಎಚ್. ಬಿ. ಕುಡಗುಂಟಿ ಪೊಲೀಸ್ ಕರ್ತವ್ಯದ ಕುರಿತು ಹಾಗೂ ಯಾವುದೇ ಕಾರಣಕ್ಕೆ ಅಮಾಯ ಕರಿಗೆ, ಮಹಿಳೆಯರಿಗೆ ತೊಂದರೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಮಹಿಳಾ ಸದಸ್ಯೆಯೋರ್ವರು ಸರಕಾರದಿಂದ ಯಾವುದೇ ರೀತಿಯ ನೆರವು ಬಂದಿಲ್ಲ, ಹಲವರು ತುಂಬಾ ಕಷ್ಟದಲ್ಲಿದ್ದು ಸಂಘ ಸಂಸ್ಥೆಗಳು ನೀಡಿದ ನೆರವು ಎಲ್ಲರಿಗೂ ಮುಟ್ಟಿಲ್ಲ, ಸರಕಾರ ಅವರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ಪುರಸಭಾ ಸದಸ್ಯರಾದ ಅಲ್ತಾಫ್ ಖರೂರಿ, ಎಸ್.ಎಂ.ಅಜೀಮ್, ರಾಘವೇಂದ್ರ ಶೇಟ್, ಅಬ್ದುಲ್ ರವೂಫ್ ನಾಯ್ತೆ ಮುಂತಾದವರು ಮಾತನಾಡಿದರು.







