ಪ್ರತ್ಯೇಕ ಪ್ರಕರಣ: ಮದ್ಯ ಸೇವಿಸಿ ಇಬ್ಬರು ಮೃತ್ಯು
ಉಡುಪಿ, ಮೇ.7: ನಗರದ ಸ್ವರ್ಣ ಅರ್ಕೆಡ್ ಬಳಿಯ ರಸ್ತೆಯಲ್ಲಿ ಗುರುವಾರ ಮುಂಜಾನೆ ಅಪರಿಚಿತ ಯುವಕನೊರ್ವ ತೀವ್ರ ಅಸ್ವಸ್ಥಗೊಂಡು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಅತಿಯಾದ ಮದ್ಯಸೇವನೆಯು ಯುವಕನ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ. ತೀವ್ರವಾಗಿ ಅಸ್ವಸ್ಥಗೊಂಡು ರಸ್ತೆಯಲ್ಲಿ ಬಿದ್ದಿದ್ದ ಯುವಕ ನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು, ತಕ್ಷಣ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಆದರೆ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತದೇಹ ವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿ ಇಡಲಾಗಿದೆ. ವಾರಸು ದಾರರು ತುರ್ತು ಅಜ್ಜರಕಾಡು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರ ವನ್ನು ಸಂಪರ್ಕಿಸವಂತೆ ತಿಳಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಸಂಗಮ್ ಬಳಿಯ ರಸ್ತೆಯ ಬದಿ ಸುಮಾರು 35 ರಿಂದ 40 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವೊಂದು ಮೇ 6ರಂದು ಮಧ್ಯಾಹ್ನ ವೇಳೆ ಪತ್ತೆಯಾಗಿದೆ.
ವ್ಯಕ್ತಿಯು ವಿಪರೀತ ಶರಾಬು ಸೇವನೆ ಮಾಡಿ ಹೃದಯಾಘಾತದಿಂದ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯವ್ಯಸನಿ ಆತ್ಮಹತ್ಯೆ: ವಿಪರೀತ ಕುಡಿತದ ಚಟ ಹೊಂದಿದ್ದ ಯುವಕನೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಪು ಠಾಣಾ ವ್ಯಾಪ್ತಿಯ ಕಟಪಾಡಿ ಜೆ.ಎನ್.ನಗರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಚಂದ್ರಕಾಂತ್ (32) ಎಂದು ಗುರುತಿಸಲಾಗಿದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







