ಮೇ.8ರಿಂದ ಕೂಲಿ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಇಲ್ಲ: ಕೆಎಸ್ಆರ್ಟಿಸಿ ಸ್ಪಷ್ಟನೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 7: ಆರು ದಿನಗಳಿಂದ ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯದ ವಿವಿಧ ಜಿಲ್ಲೆಗಳ ಕೂಲಿ ಕಾರ್ಮಿಕರನ್ನು ತಮ್ಮ ತಮ್ಮ ಜಿಲ್ಲೆಗಳಿಗೆ ಕರೆದೊಯ್ಯಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ) ಸೇರಿದಂತೆ ಸಾರಿಗೆ ಸಂಸ್ಥೆ ಕಲ್ಪಿಸಿದ್ದ ಉಚಿತ ಸಾರಿಗೆ ವ್ಯವಸ್ಥೆ ನಾಳೆ(ಮೇ 8)ಯಿಂದ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಬೆಂಗಳೂರು ನಗರ ಕೊರೋನ ವೈರಸ್ ಸೋಂಕು ಪೀಡಿತ ಕಂಟೈನ್ಮೆಂಟ್ ಝೋನ್(ಕೆಂಪು ವಲಯ)ನಲ್ಲಿರುವುದರಿಂದ ನಾಳೆಯಿಂದ ಯಾವುದೇ ಬಸ್ಗಳು ಬೆಂಗಳೂರಿನಿಂದ ಯಾವುದೇ ಬೇರೆ ಸ್ಥಳಗಳಿಗೆ ಸಂಚರಿಸುವುದಿಲ್ಲ. ಕೂಲಿ ಕಾರ್ಮಿಕರಿಗಾಗಿ ಮಾಡಲಾಗಿದ್ದ ಉಚಿತ ಸಾರಿಗೆ ವ್ಯವಸ್ಥೆ ಗುರುವಾರಕ್ಕೆ ಕೊನೆಗೊಂಡಿದೆ ಎಂದು ಸಾರಿಗೆ ಸಂಸ್ಥೆ ಮಾಹಿತಿ ನೀಡಿದೆ.
ಆರು ದಿನಗಳಿಂದ ಬೆಂಗಳೂರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಅಂದಾಜು 1,08,300 ಮಂದಿ ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ. 3,610 ಬಸ್ಗಳು ಕಾರ್ಯಾಚರಣೆ ಮಾಡಲಾಗಿದೆ. ಬೆಂಗಳೂರು ನಗರದಿಂದಲೇ 2,288 ಬಸ್ ಗಳಲ್ಲಿ ಒಟ್ಟು 69,515 ಮಂದಿ ಕಾರ್ಮಿಕರನ್ನು ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಗುರುವಾರ ಬೆಳಗ್ಗೆ 9 ಗಂಟೆಯಿಂದ ಬಸ್ ಗಳ ಕಾರ್ಯಚರಣೆ ಮಾಡಲಾಗುವುದು ಎಂದು ತಿಳಿಸಿದ್ದರೂ, 8 ಗಂಟೆಯಿಂದ ಸಂಜೆ 6:40ರ ವರೆಗೆ ಒಟ್ಟು 185 ಬಸ್ ಗಳು ರಾಜ್ಯದ 43 ಸ್ಥಳಗಳಿಗೆ ಕೂಲಿ ಕಾರ್ಮಿಕರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಕೆಎಸ್ಆರ್ಟಿಸಿ ಪ್ರಕಟಣೆ ತಿಳಿಸಿದೆ.







