ವಿಶಾಖಪಟ್ಟಣಂ ವಿಷಾನಿಲ ದುರಂತ: ಕರ್ನಾಟಕದ ಜನತೆಯ ನೆರವಿಗೆ ಸಹಾಯವಾಣಿ ಆರಂಭ

ಬೆಂಗಳೂರು, ಮೇ 7: ಆಂಧ್ರಪ್ರದೇಶದ ವಿಶಾಖಪಟ್ಟಣಂ ಸಮೀಪ ರಾಸಾಯನಿಕ ಸ್ಥಾವರದಲ್ಲಿನ ಅನಿಲ ಸೋರಿಕೆ ಘಟನೆ ಹಿನ್ನೆಲೆಯಲ್ಲಿ ಹಲವು ಮಂದಿ ಸಾವಿಗೀಡಾಗಿದ್ದು, ಸಾವಿರಾರು ಮಂದಿ ತೀವ್ರ ಅಸ್ವಸ್ಥಗೊಂಡಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಈ ದುರಂತದಲ್ಲಿ ಸಿಲುಕಿಕೊಂಡಿರುವವರ ನೆರವಿಗೆ ರಾಜ್ಯ ಸರಕಾರದಿಂದ ರಾಯಚೂರು ಜಿಲ್ಲಾಡಳಿತ ಸಹಾಯವಾಣಿಯನ್ನು ಆರಂಭಿಸಿದೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿಯೂ ಆಗಿರುವ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ವಿಷಾನಿಲ ಸೋರಿಕೆ ದುರಂತದಲ್ಲಿ ಕರ್ನಾಟಕ ರಾಜ್ಯದ ಯಾರಾದರೂ ಸಿಲುಕಿದ್ದರೆ ಅವರನ್ನು ಪತ್ತೆ ಹಚ್ಚುವ ದೃಷ್ಟಿಯಿಂದ ಸಹಾಯವಾಣಿ ಆರಂಭಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಸಂತ್ರಸ್ತರು ಮತ್ತವರ ಕುಟುಂಬದ ಸದಸ್ಯರು ಸಹಾಯವಾಣಿ ಸಂಖ್ಯೆ-08532-228559 ಅಥವಾ ಮೊಬೈಲ್ ಸಂಖ್ಯೆ-86607 61866 ಅನ್ನು ಸಂಪರ್ಕಿಸಿ ಇದರ ಉಪಯೋಗ ಮಾಡಿಕೊಳ್ಳಬೇಕು ಎಂದು ಕೋರಿರುವ ಲಕ್ಷ್ಮಣ ಸವದಿ, ವಿಷಾನಿಲ ಸೋರಿಕೆ ದುರಂತ ನಿಜಕ್ಕೂ ದುರ್ದೈವ. ಮೃತರಿಗೆ ಈ ಸಂದರ್ಭದಲ್ಲಿ ಸಾಂತ್ವನ ಹೇಳುತ್ತೇನೆ ಎಂದರು.
ತೀವ್ರವಾಗಿ ಅಸ್ವಸ್ಥಗೊಂಡವರು ಶೀಘ್ರವೇ ಚೇತರಿಸಿಕೊಳ್ಳಲಿ. ದೇಶವೇ ಕೊರೋನ ವೈರಸ್ ಸೋಂಕು ತಡೆಗಟ್ಟಲು ಹೋರಾಡುತ್ತಿರುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿರುವುದು ಅತ್ಯಂತ ನೋವಿನ ಸಂಗತಿ. ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ನೀಡಲು ಆಂಧ್ರಪ್ರದೇಶ ಸರಕಾರ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ವಿಶಾಖಪಟ್ಟಣದಲ್ಲಿ ಸಂಭವಿಸಿರುವ ಅನಿಲ ಸೋರಿಕೆ ದುರಂತ ಅತ್ಯಂತ ದುರದೃಷ್ಟಕರ. ಈ ಘಟನೆಯಿಂದ ಸಂಭವಿಸುತ್ತಿರುವ ಸಾವು-ನೋವುಗಳು ಅತೀವ ದುಃಖವುಂಟು ಮಾಡಿದೆ. ಶೀಘ್ರವೇ ಪರಿಸ್ಥಿತಿ ಹತೋಟಿಗೆ ಬರಲಿ ಎಂದು ಆಶಿಸುತ್ತೇನೆ'
-ಯಡಿಯೂರಪ್ಪ, ಮುಖ್ಯಮಂತ್ರಿ( ಟ್ವೀಟ್)







