ಜಗತ್ತಿನಾದ್ಯಂತ 90,000ಕ್ಕೂ ಹೆಚ್ಚು ನರ್ಸ್‌ಗಳಿಗೆ ಕೊರೋನ ವೈರಸ್ ಸೋಂಕು

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮೇ 7: ಜಗತ್ತಿನಾದ್ಯಂತ ಕನಿಷ್ಠ 90,000 ಆರೋಗ್ಯ ರಕ್ಷಣೆ ಕೆಲಸಗಾರರು ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಭಾವಿಸಲಾಗಿದೆ, ಆದರೆ, ಈ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆಯೂ ಇದೆ ಎಂದು ಅಂತರ್‌ರಾಷ್ಟ್ರೀಯ ನರ್ಸ್‌ಗಳ ಮಂಡಳಿ (ಐಸಿಎನ್) ಬುಧವಾರ ಹೇಳಿದೆ.
ಈ ಕಾಯಿಲೆಯು 260ಕ್ಕೂ ಹೆಚ್ಚು ನರ್ಸ್‌ಗಳನ್ನು ಕೊಂದಿದೆ ಎಂದು ಮಂಡಳಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ ಹಾಗೂ ಸಿಬ್ಬಂದಿ ಮತ್ತು ರೋಗಿಗಳಿಗೆ ರೋಗ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಇನ್ನಷ್ಟು ನಿಖರ ದಾಖಲೆಗಳನ್ನು ಇಟ್ಟುಕೊಳ್ಳುವಂತೆ ಅದು ವಿವಿಧ ದೇಶಗಳ ಸರಕಾರಗಳನ್ನು ಒತ್ತಾಯಿಸಿದೆ.
ನೋವೆಲ್-ಕೊರೋನ ವೈರಸ್‌ನಿಂದಾಗಿ 100 ನರ್ಸ್‌ಗಳು ಮೃತಪಟ್ಟಿದ್ದಾರೆ ಎಂಬುದಾಗಿ ಒಂದು ತಿಂಗಳ ಹಿಂದೆ ಜಿನೀವದಲ್ಲಿ ಪ್ರಧಾನ ಕಚೇರಿ ಹೊಂದಿರುವ ಈ ಸಂಘಟನೆ ಹೇಳಿತ್ತು.
‘‘ಕೊರೋನ ವೈರಸ್ ಸೋಂಕಿಗೆ ಒಳಗಾಗಿರುವ ನರ್ಸ್‌ಗಳ ಸಂಖ್ಯೆ ಒಂದು ತಿಂಗಳ ಹಿಂದೆ ಇದ್ದ 23,000ದಿಂದ ಈಗ 90,000ವನ್ನು ದಾಟಿದೆ ಎಂದು ನಾವು ಭಾವಿಸಿದ್ದೇವೆ. ಆದರೆ, ಈ ಸಂಖ್ಯೆಯು ಕಡಿಮೆಯೇ ಆಗಿದೆ. ಯಾಕೆಂದರೆ, ಜಗತ್ತಿನ ಎಲ್ಲ ದೇಶಗಳ ನರ್ಸ್‌ಗಳ ಸಂಖ್ಯೆ ಇದರಲ್ಲಿ ಒಳಗೊಂಡಿಲ್ಲ’’ ಎಂದು ಐಸಿಎನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೊವಾರ್ಡ್ ಕ್ಯಾಟನ್ ‘ರಾಯ್ಟರ್ಸ್ ಟೆಲಿವಿಶನ್’ಗೆ ತಿಳಿಸಿದರು.







