ಕೋವಿಡ್-19: ಉಡುಪಿಯಲ್ಲಿ ಗುರುವಾರ 84 ವರದಿ ನೆಗೆಟಿವ್
ಉಡುಪಿ, ಮೇ 7: ಶಂಕಿತ ನೋವೆಲ್ ಕೊರೋನ ವೈರಸ್ (ಕೋವಿಡ್- 19) ಸೋಂಕಿನ ಗಂಟಲು ದ್ರವದ ಮಾದರಿ ಪರೀಕ್ಷೆಯಲ್ಲಿ ಗುರುವಾರ ಇನ್ನೂ 84 ಮಾದರಿಗಳು ನೆಗೆಟಿವ್ ಆಗಿ ಬಂದಿವೆ. ನಿನ್ನೆಯವರೆಗೆ ಬಾಕಿ ಇದ್ದ 111 ಸ್ಯಾಂಪಲ್‌ಗಳಲ್ಲಿ 27ರ ವರದಿ ಬರಬೇಕಿದ್ದು, ಇದರೊಂದಿಗೆ ಗುರುವಾರ ಕಳುಹಿಸಿದ 53 ಮಾದರಿಗಳು ಸೇರಿದಂತೆ ಒಟ್ಟು 80 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಗುರುವಾರ ಕೊರೋನ ರೋಗದ ಗುಣಲಕ್ಷಣಗಳಿದ್ದ 53 ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಇವುಗಳಲ್ಲಿ ಎಂಟು ಮಂದಿ ತೀವ್ರ ಉಸಿರಾಟದ ತೊಂದರೆಯವರು, ಆರು ಮಂದಿ ಶೀತಜ್ವರದಿಂದ ಬಳಲುವವರು ಹಾಗೂ 39 ಮಂದಿ ಕೊರೋನ ಹಾಟ್‌ಸ್ಪಾಟ್‌ನಿಂದ ಬಂದವರ ಸ್ಯಾಂಪಲ್‌ಗಳು ಸೇರಿವೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಇಂದಿನವರೆಗೆ ಒಟ್ಟು 1410 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 1330ರ ವರದಿ ಬಂದಿದ್ದು, 1327 ನೆಗೆಟಿವ್ ಆಗಿವೆ. ಜಿಲ್ಲೆಯಲ್ಲಿ ಪಾಸಿಟಿವ್ ಬಂದ ಮೂವರು ಗುಣಮುಖರಾಗಿದ್ದಾರೆ ಎಂದವರು ಹೇಳಿದರು.
ಶಂಕಿತ ನೋವೆಲ್ ಕೊರೋನ ಸೋಂಕಿನ ಪರೀಕ್ಷೆಗಾಗಿ ಇಂದು 12 ಮಂದಿ ಜಿಲ್ಲೆಯ ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿಗೆ ಸೇರ್ಪಡೆಗೊಂಡಿದ್ದಾರೆ. ಇವರಲ್ಲಿ ಎಂಟು ಮಂದಿ ತೀವ್ರತರದ ಉಸಿರಾಟ ತೊಂದರೆ ಹಾಗೂ ನಾಲ್ವರು ಶೀತಜ್ವರದ ಬಾಧೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ ಎಂಟು ಪುರುಷರು ಹಾಗೂ ನಾಲ್ವರು ಮಹಿಳೆಯರು ಸೇರಿದ್ದಾರೆ. ಐಸೋಲೇಶನ್ ವಾರ್ಡಿನಿಂದ ಇಂದು 10 ಮಂದಿ ಬಿಡುಗಡೆಗೊಂಡಿದ್ದು, 50 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ. 403 ಮಂದಿ ಈಗಾಗಲೇ ವಾರ್ಡಿನಿಂದ ಬಿಡುಗಡೆ ಗೊಂಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ ವಿವಿಧ ಹಿನ್ನೆಲೆಯೊಂದಿಗೆ 103 ಮಂದಿ ಇಂದು ಹೊಸದಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4124 ಮಂದಿಯನ್ನು ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 2503 (ಇಂದು 86) ಮಂದಿ 28 ದಿನಗಳ ನಿಗಾವನ್ನೂ, 3363 (85) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಈಗ ಒಟ್ಟು 685 ಮಂದಿ ಹೋಮ್ ಕ್ವಾರಂಟೈನ್ ಹಾಗೂ 26 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದರು.







