ಕೊರೋನ ವೈರಸ್ ಮಾನವ ದೇಹ ವ್ಯವಸ್ಥೆಗೆ ಹೆಚ್ಚೆಚ್ಚು ಹೊಂದಿಕೊಂಡು ಬರುತ್ತಿದೆ
ಲಂಡನ್ ವಿಜ್ಞಾನಿಗಳ ಅಧ್ಯಯನ ವರದಿ

ಲಂಡನ್, ಮೇ 7: ನೂತನ-ಕೊರೋನ ವೈರಸ್ ಕಳೆದ ವರ್ಷದ ಅಕ್ಟೋಬರ್ ಮತ್ತು ಡಿಸೆಂಬರ್ ನಡುವಿನ ಅವಧಿಯಲ್ಲಿ ಚೀನಾದಲ್ಲಿ ಕಾಣಿಸಿಕೊಂಡಿತು ಹಾಗೂ ಬಳಿಕ ಕ್ಷಿಪ್ರವಾಗಿ ಜಗತ್ತಿನಾದ್ಯಂತ ಹರಡಿತು.
ಈ ವೈರಸ್ ವೇಗವಾಗಿ ಹರಡುತ್ತಿರುವಂತೆಯೇ ಮಾನವನ ದೇಹ ವ್ಯವಸ್ಥೆಗೆ ಹೆಚ್ಚೆಚ್ಚು ಹೊಂದಿಕೊಂಡು ಬರುತ್ತಿದೆ ಎನ್ನವುದು ವೈರಸ್‌ನ ವಂಶವಾಹಿ ಅಧ್ಯಯನದಿಂದ ತಿಳಿದು ಬಂದಿದೆ ಎಂದು ಲಂಡನ್ ನ ವಿಜ್ಞಾನಿಗಳು ಹೇಳಿದ್ದಾರೆ.
ವಿಜ್ಞಾನಿಗಳು ನಡೆಸಿದ 7,500ಕ್ಕೂ ಹೆಚ್ಚು ಜನರ ಮಾದರಿಗಳ ಅಧ್ಯಯನದ ವೇಳೆ ಸುಮಾರು 200 ಮಾದರಿಗಳಲ್ಲಿ ವೈರಸ್‌ನ ವಂಶವಾಹಿಗಳಲ್ಲಿ ಪರಿವರ್ತನೆಯಾಗಿರುವುದು ಇದನ್ನು ಸೂಚಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘‘ಕೋವಿಡ್-19 ಸಾಂಕ್ರಾಮಿಕವು 2019 ಅಕ್ಟೋಬರ್ 6 ಮತ್ತು ಡಿಸೆಂಬರ್ 11ರ ನಡುವಿನ ಅವಧಿಯಲ್ಲಿ ಆರಂಭಗೊಂಡಿದೆ. ಈ ಅವಧಿಯಲ್ಲಿ ವೈರಸ್ ಪ್ರಾಣಿಯೊಂದರಿಂದ ಮಾನವನಿಗೆ ಬಂದಿದೆ ಎನ್ನುವುದನ್ನು ಫೈಲೋಜನೆಟಿಕ್ ಅಧ್ಯಯನವು ತಿಳಿಸಿದೆ’’ ಎಂದು ಫ್ರಾಂಕೋಯಿಸ್ ಬಲೂಸ್ ನೇತೃತ್ವದ ಸಂಶೋಧನಾ ತಂಡವು ‘ಇನ್‌ಫೆಕ್ಷನ್, ಜನೆಟಿಕ್ಸ್ ಆ್ಯಂಡ್ ಎವಲೂಶನ್’ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ವರದಿಯೊಂದರಲ್ಲಿ ಬರೆದಿದೆ.
ಸಾಮಾನ್ಯವಾಗಿ ವೈರಸ್‌ಗಳಲ್ಲಿ ಸಂಭವಿಸುವಂತೆ, ಈ ನೂತನ-ಕೊರೋನ ವೈರಸ್ ಕೂಡ ಹಿಂದೆಯೂ ರೂಪಾಂತರಗೊಳ್ಳುತ್ತಿತ್ತು ಮತ್ತು ಈಗಲೂ ರೂಪಾಂತರಗೊಳ್ಳುತ್ತಿದೆ ಎನ್ನುವುದು ವೈಜ್ಞಾನಿಕ ವಿಶ್ಲೇಷಣೆಯಲ್ಲಿ ತಿಳಿದುಬಂದಿದೆ ಎಂದರು.
‘‘ಎಲ್ಲ ವೈರಸ್‌ಗಳು ಸಹಜವಾಗಿಯೇ ರೂಪಾಂತರಗೊಳ್ಳುತ್ತವೆ. ರೂಪಾಂತರಗಳು ಅವುಗಳಷ್ಟಕ್ಕೇ ಕೆಟ್ಟದೇನಲ್ಲ. ಹಾಗೂ ನೂತನ-ಕೊರೋನ ವೈರಸ್ ನಿರೀಕ್ಷೆಗಿಂತ ವೇಗವಾಗಿ ಅಥವಾ ನಿಧಾನವಾಗಿ ರೂಪಾಂತರಗೊಳ್ಳುತ್ತಿವೆ ಎನ್ನುವುದನ್ನು ಸಮರ್ಥಿಸುವ ಪುರಾವೆಗಳಿಲ್ಲ’’ ಎಂದು ವರದಿ ಹೇಳಿದೆ.
‘‘ನೂತನ-ಕೊರೋನ ವೈರಸ್ ಹೆಚ್ಚು ಅಥವಾ ಕಡಿಮೆ ಮಾರಕ ಮತ್ತು ಸಾಂಕ್ರಾಮಿಕವಾಗುತ್ತಿದೆಯೇ ಎನ್ನುವುದನ್ನು ಸದ್ಯಕ್ಕೆ ಹೇಳಲು ನಮಗೆ ಸಾಧ್ಯವಿಲ್ಲ’’ ಎಂದಿದೆ.







