ಇಸ್ರೇಲ್: ನೆತನ್ಯಾಹು, ಎದುರಾಳಿಯಿಂದ ಸಮ್ಮಿಶ್ರ ಸರಕಾರ

ಜೆರುಸಲೇಮ್, ಮೇ 7: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಎದುರಾಳಿ ಹಾಗೂ ಈಗ ಮಿತ್ರನಾಗಿರುವ ಬೆನ್ನಿ ಗಾಂಟ್ಝ್ ನಡುವಿನ ಸಮ್ಮಿಶ್ರ ಸರಕಾರಕ್ಕೆ ದೇಶದ ಸುಪ್ರೀಮ್ ಕೋರ್ಟ್ ಬುಧವಾರ ಅನುಮೋದನೆ ನೀಡಿದೆ.
ಹಾಗಾಗಿ, ಮಿತ್ರಪಕ್ಷಗಳು ಏಕತಾ ಸರಕಾರವೊಂದನ್ನು ರಚಿಸಲಿದ್ದು, ಮುಂದಿನ ವಾರ ಅಸ್ತಿತ್ವಕ್ಕೆ ಬರಲಿದೆ.
ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ನಡೆದ ಮೂರು ಚುನಾವಣೆಗಳಲ್ಲಿಯೂ ಅನಿಶ್ಚಿತ ಫಲಿತಾಂಶ ಬಂದ ಹಿನ್ನೆಲೆಯಲ್ಲಿ, ಬಲಪಂಥೀಯ ಹಾಲಿ ಪ್ರಧಾನಿ ಮತ್ತು ಮಧ್ಯಪಂಥೀಯ ಗಾಂಟ್ಝ್ ಕಳೆದ ತಿಂಗಳು ಸಮ್ಮಿಶ್ರ ಸರಕಾರವೊಂದನ್ನು ರಚಿಸುವ ಒಪ್ಪಂದಕ್ಕೆ ಬಂದಿದ್ದರು.
ಈ ನಾಯಕರು ಮೂರು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದು, ಮೊದಲ 18 ತಿಂಗಳು ನೆತನ್ಯಾಹು ಅವರೇ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಹಾಗೂ ಗಾಂಟ್ಝ್ ಉಪಪ್ರಧಾನಿಯಾಗಲಿದ್ದಾರೆ. ಉಪಪ್ರಧಾನಿಯು ಇಸ್ರೇಲ್ ಸರಕಾರದಲ್ಲಿ ನೂತನ ಹುದ್ದೆಯಾಗಿದೆ.
ಕೊನೆಯ 18 ತಿಂಗಳ ಅವಧಿಗೆ ಅವರು ತಮ್ಮ ಹುದ್ದೆಗಳನ್ನು ಬದಲಾಯಿಸಿಕೊಳ್ಳಲಿದ್ದಾರೆ. ಸಚಿವ ಹುದ್ದೆಗಳು ನೆತನ್ಯಾಹುರ ಲಿಕುಡ್ ಪಕ್ಷ ಮತ್ತು ಗಾಂಟ್ಝ್‌ರ ಬ್ಲೂ ಆ್ಯಂಡ್ ವೈಟ್ ಮಿತ್ರಕೂಟಗಳ ನಡುವೆ ಹಂಚಿಕೆಯಾಗಲಿವೆ.
ಇಸ್ರೇಲ್‌ನಲ್ಲಿ 2018 ಡಿಸೆಂಬರ್ ಬಳಿಕ ಸ್ಥಿರ ಸರಕಾರವಿಲ್ಲ.







