ಹೆಬ್ರಿ: ಸೋಮೇಶ್ವರ ಅಭಯಾರಣ್ಯದಲ್ಲಿ ಬೆಂಕಿ

ಹೆಬ್ರಿ, ಮೇ 7: ಇಲ್ಲಿನ ಸೋಮೇಶ್ವರ ಅಭಯಾರಣ್ಯಕ್ಕೆ ಸೇರಿದ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಜ್ಕೆ, ಓಣಿಕಲ್ಲು ಅರಣ್ಯ ಪ್ರದೇಶದಲ್ಲಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರಬೇಕೆಂಬ ಶಂಕೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ವ್ಯಕ್ತಪಡಿಸುತಿದ್ದಾರೆ.
ಹೆಬ್ರಿ ಸಮೀಪದ ಚಾರ ಗ್ರಾಮಕ್ಕೆ ಸೇರಿದ ಅರಣ್ಯ ಪ್ರದೇಶದಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 50 ಎಕರೆಗಳಷ್ಟು ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ ಎಂದು ಅಂದಾಜಿಸಲಾಗಿದೆ.
ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳೀಯರು ಹಾಗೂ ವಿವೇಕಾನಂದ ಯುವ ವೇದಿಕೆಯ ಸದಸ್ಯರು ಈ ಕಾರ್ಯದಲ್ಲಿ ಕೈಜೋಡಿಸಿದ್ದು, ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದರಿಂದ ಅಪಾರ ಪ್ರಮಾಣದ ಮರಗಿಡಗಳು ನಾಶವಾಗಿದ್ದು, ಅಲ್ಲಿದ್ದ ಪ್ರಾಣಿ ಪಕ್ಷಿಗಳಿಗೂ ಸಾಕಷ್ಟು ಹಾನಿಯಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ. ಕಿಡೇಗಿಡಿಗಳ ಈ ಕೃತ್ಯದ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಅವರು ಆಗ್ರಹಿಸಿದ್ದಾರೆ.
ಇಡೀ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವ ಭರವಸೆಯನ್ನು ಹೆಬ್ರಿ ವಲಯ ಅರಣ್ಯಾಧಿಕಾರಿ ಮುನಿರಾಜು ನೀಡಿದ್ದಾರೆ.











