ಕೋವಿಡ್-19 ಚಿಕಿತ್ಸೆಗೆ ಗಂಗಾಜಲ?: ಸಂಶೋಧನೆ ನಡೆಸಬೇಕೆಂಬ ಕೇಂದ್ರದ ಸಲಹೆಗೆ ಐಸಿಎಂಆರ್ ನಕಾರ

ಹೊಸದಿಲ್ಲಿ, ಮೇ 7: ಗಂಗಾಜಲದಿಂದ ಮಾರಕವಾದ ಕೋವಿಡ್-19 ರೋಗವನ್ನು ಗುಣಪಡಿಸಲು ಸಾಧ್ಯವಿದೆಯೆಂಬ ಸಿದ್ಧಾಂತದ ಬಗ್ಗೆ ಸಂಶೋಧನೆಯನ್ನು ನಡೆಸಬೇಕೆಂಬ ನರೇಂದ್ರ ಮೋದಿ ಸರಕಾರದ ಮನವಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿರಸ್ಕರಿಸಿದೆ.
ಐಸಿಎಂಆರ್ ಈಗ ಕೋವಿಡ್-19 ರೋಗದ ವಿರುದ್ಧ ಹೋರಾಟದಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಈ ಸಾಂಕ್ರಾಮಿಕ ಕಾಯಿಲೆಯ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಬೇರೊಂದು ಸಂಶೋಧನೆ ನಡೆಸಿ ಸಮಯ ವ್ಯರ್ಥ ಮಾಡಲು ತಾನು ಬಯಸುವುದಿಲ್ಲವೆಂದು ಮಂಡಳಿಯ ಮೂಲಗಳು ತಿಳಿಸಿರುವುದಾಗಿ ‘theprint’ ಸುದ್ದಿಜಾಲತಾಣ ವರದಿ ಮಾಡಿದೆ.
ಕೊರೋನ ವೈರಸ್ ಸೋಂಕನ್ನು ಗಂಗಾನದಿಯ ನೀರಿನಿಂದ ಗುಣಪಡಿಸ ಬಹುದಾದ ಸಾಧ್ಯತೆಗಳ ಬಗ್ಗೆ ಸಂಶೋಧನೆಯನ್ನು ನಡೆಸಬೇಕೆಂದು ಎನ್‌ಜಿಓ ಸಂಸ್ಥೆ ‘ಅತುಲ್ಯ ಗಂಗಾ’ ಕೇಂದ್ರ ಸರಕಾರಕ್ಕೆ ಪ್ರಸ್ತಾವ ಮಾಡಿತ್ತು. ಆನಂತರ ಕೇಂದ್ರ ಜಲಶಕ್ತಿ ಸಚಿವಾಲಯವು ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುವಂತೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯನ್ನು ಕೋರಿತ್ತೆಂದು ಹೆಸರು ಬಹಿರಂಗ ಪಡಿಸಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಂಗಾನದಿಯಲ್ಲಿ ‘ನಿಂಜಾ ವೈರಸ್’ ಎಂದು ಕರೆಯಲಾಗುವ ಬ್ಯಾಕ್ಟೀರಿಯಾ ಫೇಜ್‌ಗಳಿದ್ದು, ಅವು ಕೋವಿಡ್-19 ರೋಗವನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ ಎಂದು ‘ಅತುಲ್ಯಗಂಗಾ’ ಎಪ್ರಿಲ್ 3ರಂದು ಕೇಂದ್ರ ಸರಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿತ್ತು. ‘ನಿಂಜಾ ವೈರಸ್’ ವಿಶೇಷ ರೀತಿಯ ವೈರಸ್ ಆಗಿದ್ದು, ಅದು ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಆದರೆ ಕೋವಿಡ್-19 ಎಂಬುದು ವೈರಸ್ ಆಗಿದೆ.
ಎನ್‌ಜಿಓ ‘ಅತುಲ್ಯಗಂಗಾ’ ತನ್ನ ಪತ್ರದ ಪ್ರತಿಯನ್ನು ಜಲಶಕ್ತಿ ಸಚಿವಾಲಯ ಹಾಗೂ ಪ್ರಧಾನಿ ಕಚೇರಿಗೂ ಸಲ್ಲಿಸಿತ್ತು.
ಆನಂತರ ಸ್ವಚ್ಛ ಗಂಗಾ ರಾಷ್ಟ್ರೀಯ ಮಿಶನ್ ಇಲಾಖೆಯು ಎಪ್ರಿಲ್ 30ರದು ಐಸಿಎಂಆರ್‌ಗೆ ಪತ್ರಬರೆದು ಗಂಗಾನದಿಯ ನೀರಿನ ಬಗ್ಗೆ ಸಂಶೋಧನೆ ನಡೆಸುವಂತೆ ಕೋರಿತ್ತು.
ಐಸಿಎಂಆರ್ ಆ ಬಳಿಕ ಸಭೆ ನಡೆಸಿ ಈ ಪ್ರಸ್ತಾವದ ಬಗ್ಗೆ ಚರ್ಚಿಸಿತ್ತು. ಆದರೆ ಆ ನಿಟ್ಟಿನಲ್ಲಿ ಮುಂದುವರಿಯಲು ಅದು ನಿರಾಕರಿಸಿತ್ತು. ಆದಾಗ್ಯೂ ಎನ್‌ಜಿಓಗೆ ಈ ನಿಟ್ಟಿನಲ್ಲಿ ಸಹಕರಿಸುವ ಭರವಸೆಯನ್ನು ನೀಡಿತ್ತು.







