"ಈ ಬಾರಿ ಈದ್‌ಗೆ ಹೊಸಬಟ್ಟೆ ಖರೀದಿ ಬೇಡ"
ಉಡುಪಿ ಜಿಲ್ಲೆಯ ಮುಸ್ಲಿಮರಲ್ಲಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮನವಿ

ಉಡುಪಿ, ಮೇ 7: ಕೋವಿಡ್-19ನಿಂದಾಗಿ ಒಂದೂವರೆ ತಿಂಗಳಿಂದ ಜನಜೀವನ ಸಂಪೂರ್ಣವಾಗಿ ಹಳಿತಪ್ಪಿದೆ. ಇಡೀ ಜಗತ್ತು ಈ ಹಿಂದೆಂದೂ ಕಂಡು ಕೇಳರಿಯದ ರೀತಿ ತಲ್ಲಣಗೊಂಡಿದೆ. ಕರ್ನಾಟಕದಲ್ಲೂ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ ಅದರಿಂದ ಸಾವಿಗೀಡಾದವರ ಸಂಖ್ಯೆಯೂ ಏರುತ್ತಲೇ ಇದೆ. ಈ ನಡುವೆ ಜಿಲ್ಲಾಡಳಿತದ, ಆರೋಗ್ಯ ಸೇವಾ ಸಿಬ್ಬಂದಿ ಕಠಿಣ ಪರಿಶ್ರಮ, ನಿಸ್ವಾರ್ಥ ಸೇವೆಯಿಂದ ಉಡುಪಿ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಇಳಿಮುಖವಾಗಿ ಗ್ರೀನ್ ಝೋನ್‌ಗೆ ಬಂದಿದೆ. ಈ ಸುರಕ್ಷಿತ ಪರಿಸ್ಥಿತಿಯನ್ನು ಹೀಗೆಯೇ ಕಾಪಾಡಿಕೊಳ್ಳುವ ಮಹತ್ತರವಾದ ಜವಾಬ್ದಾರಿ ಜಿಲ್ಲೆಯ ಪ್ರತಿಯೊಬ್ಬ ಪ್ರಜೆಯ ಮೇಲಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ತಿಳಿಸಿದೆ.
ಕೊರೋನ ಸೋಂಕು ಇನ್ನು ಯಾವ ಕಾರಣಕ್ಕೂ ಉಡುಪಿ ಜಿಲ್ಲೆಯಲ್ಲಿ ಹರಡದಂತೆ ಖಾತರಿಪಡಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ನಾವು ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ಸಂಪೂರ್ಣ ಸಹಕಾರ ನೀಡಬೇಕಾಗಿದೆ. ನಮ್ಮ ಒಂದು ತಪ್ಪುಹೆಜ್ಜೆಯಿಂದಾಗಿ ಜಿಲ್ಲೆಯಲ್ಲಿ ಮತ್ತೆ ಸೋಂಕಿನ ಪ್ರವೇಶವಾಗಬಾರದು. ಇಷ್ಟು ಸುದೀರ್ಘ ಕಾಲ ಮಾಡಿದ ತ್ಯಾಗ ಹಾಗೂ ಶ್ರಮ ವ್ಯರ್ಥವಾಗಬಾರದು ಎಂದು ಒಕ್ಕೂಟದ ಅಧ್ಯಕ್ಷ ಎಚ್.ಎಂ.ಯಾಸೀನ್ ಮಲ್ಪೆ ಮನವಿ ಮಾಡಿದ್ದಾರೆ.
ಕಳೆದ 6 ಶುಕ್ರವಾರಗಳನ್ನು ಜುಮಾ ನಮಾಝ್ ನೆರವೇರಿಸದೆ ಅತ್ಯಂತ ದುಃಖದಿಂದ ಕಳೆದಿದ್ದೇವೆ. ಪವಿತ್ರ ರಮಝಾನ್ ತಿಂಗಳಲ್ಲೂ ದಿನದ ಐದು ಹೊತ್ತು ನಮಾಝ್ ಹಾಗೂ ತರಾವೀಹ್ ನಮಾಝ್‌ಗೆ ಮಸೀದಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇದು ನೋವಿನ ವಿಚಾರವಾದರೂ ನಮ್ಮ ಜಿಲ್ಲೆ ಹಾಗೂ ದೇಶದ ಹಿತದೃಷ್ಟಿಯಿಂದ ಸ್ವತಃ ಕಾಳಜಿ ವಹಿಸಿ ಈ ಮಹಾ ತ್ಯಾಗ ಮಾಡಿದ್ದೇವೆ. ಜೊತೆಗೆ ಈ ಕಠಿಣ ಸಂದರ್ಭದಲ್ಲಿ ಕಷ್ಟದಲ್ಲಿರುವ ಸರ್ವಧರ್ಮದ ಜನರಿಗೆ ಗರಿಷ್ಠ ಸಹಾಯ ಮಾಡಿ ಎಲ್ಲರಿಗೂ ಮಾದರಿಯಾಗಿದ್ದೇವೆ. ನಮ್ಮ ವಿವಿಧ ಸಂಘಟನೆಗಳು, ಸಂಸ್ಥೆಗಳು, ಮಸೀದಿ ಜಮಾಅತ್‌ಗಳು ಹಾಗೂ ವೈಯಕ್ತಿಕವಾಗಿ ಈ ಜಿಲ್ಲೆಯ ಮುಸ್ಲಿಮರು ಮಾಡಿದ ಸೇವಾ ಕೈಂಕರ್ಯಕ್ಕೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇದುವರೆಗೆ ಎಲ್ಲ ಸಮಯೋಚಿತ, ಮಾನವೀಯ ತೀರ್ಮಾನಗಳನ್ನು ಕೈಗೊಂಡ ಹಾಗೂ ಅವುಗಳನ್ನು ಚಾಚೂತಪ್ಪದೆ ಅನುಸರಿಸಿದ ನಾವು ಇನ್ನು ಮುಂದಿನ ಕೆಲವೇ ಕೆಲವು ದಿನಗಳಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯೂ ಅತ್ಯಂತ ಮುಖ್ಯವಾಗಿದ್ದು, ಅದರಲ್ಲಿ ನಾವು ಯಾವುದೇ ಕಾರಣಕ್ಕೂ ಎಡವಬಾರದು. ಎಡವಿ ಸ್ವತಃ ನಮಗೆ, ಇಡೀ ಸಮಾಜಕ್ಕೆ, ಇಡೀ ಜಿಲ್ಲೆಗೆ ಅಪಾಯಕಾರಿ ಗಳಾಗಬಾರದು. ಹಾಗಾಗಿ ಈದುಲ್‌ಫಿತ್ರ್ ಮುಗಿಯುವವರೆಗೆ ನಾವು ಯಾವುದೇ ಕಾರಣಕ್ಕೂ ತೀರಾ ಅಗತ್ಯ ಮತ್ತು ತುರ್ತು ಕೆಲಸಗಳಿಗೆ ಅಲ್ಲದೆ ಬೇರಾವುದಕ್ಕೂ ಹೊರಗೆ ಹೋಗಲೇಬಾರದು. ಅಂಗಡಿಗಳು ತೆರೆದಿರಬಹುದು. ಆದರೆ ಕೊರೋನ ಇನ್ನೂ ತನ್ನ ಬಾಗಿಲು ಮುಚ್ಚಿಲ್ಲ ಎಂಬುದು ನಮಗೆ ನೆನಪಿರಬೇಕು. ಇಡೀ ಜಿಲ್ಲೆಗೆ ಕೊರೋನ ಹರಡಲು ಒಬ್ಬ ಸೋಂಕಿತ ಸಾಕು. ಹಾಗಾಗಿ ನಮ್ಮ ಬೇಜವಾಬ್ದಾರಿತನ ನಮಗೇ ಮಾರಿಯಾಗುವುದು ಬೇಡ. ಕಂಡವರ, ಎಲ್ಲ ಸಮಸ್ಯೆಗಳನ್ನು ನಿರ್ದಿಷ್ಟ ಸಮುದಾಯದ ತಲೆಗೆ ಕಟ್ಟಲು ಹಾತೊರೆದು ಕಾಯುತ್ತಿರುವ ಬಾಯಿಗಳಿಗೆ ಆಹಾರವಾಗುವುದು ಬೇಡ ಎಂದವರು ಮನವಿಯಲ್ಲಿ ತಿಳಿಸಿದ್ದಾರೆ.
ಅಷ್ಟಕ್ಕೂ ಸಾಮೂಹಿಕ ನಮಾಝ್ ಇಲ್ಲದ, ಜುಮಾ ಇಲ್ಲದ, ಸಾಮೂಹಿಕ ತರಾವೀಹ್ ಇಲ್ಲದ ರಮಝಾನ್ ಆಚರಿಸುತ್ತಿರುವ ನಮಗೆ ಬಟ್ಟೆ ಖರೀದಿಯಿಂದ ಹಬ್ಬದ ಖುಷಿ ಸಿಗಲು ಸಾಧ್ಯವೇ? ನಮ್ಮ ಅಣ್ಣತಮ್ಮಂದಿರು, ನೆರಹೊರೆಯವರು, ದೇಶಬಾಂಧವರು ಹಸಿದಿರುವಾಗ, ಸಮಸ್ಯೆಯಲ್ಲಿರುವಾಗ ನಮಗೆ ಹೊಸ ಬಟ್ಟೆ ಖರೀದಿಸಲು ಮನಸ್ಸಾಗುವುದೇ? ಈ ಬಾರಿ ಈದುಲ್ ಫಿತ್ರ್ ಇಲ್ಲದವರೊಂದಿಗೆ ಹಂಚಿ ತಿನ್ನುವ ಮೂಲಕ ನಾವು ಆಚರಿಸೋಣ. ತೀರಾ ಆರ್ಥಿಕ ಒತ್ತಡದಲ್ಲಿರುವ ಆದರೆ ಬಾಯಿಬಿಟ್ಟು ಕೇಳಲು ಮುಜುಗರ ಪಡುವ ಸಂಬಂಧಿಕರು, ಮಿತ್ರರು, ಸಹೋದ್ಯೋಗಿಗಳು, ನೆರೆಹೊರೆಯವರು ಇದ್ದಾರೆ ಎಂಬ ಅರಿವು ನಮ್ಮಲ್ಲಿರಲಿ. ದಿನಸಿ ಕಿಟ್‌ಗಳಿಂದ ಹಸಿವು ನೀಗುತ್ತದೆ, ಆದರೆ ಎಲ್ಲ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಮಕ್ಕಳ ಶಾಲಾ ಫೀಸು ಕಟ್ಟಲು, ಮನೆಯ ಬಾಡಿಗೆ ಕಟ್ಟಲು, ಇತರ ಅಗತ್ಯಗಳಿಗಾಗಿ ಬೇರೆಯವರ ಬಳಿ ಕೈಚಾಚಬೇಕಾದ ಪರಿಸ್ಥಿತಿಯಲ್ಲಿ ಬಹಳ ಜನರಿದ್ದಾರೆ. ಅವರು ಯಾವುದೇ ಧರ್ಮದವರಾಗಿರಲಿ, ನಾವಾಗಿ ಹೋಗಿ ಅಂತಹವರ ಕಷ್ಟಗಳನ್ನು ಹಂಚಿಕೊಳ್ಳೋಣ. ನಮ್ಮಿಂದ ಸಾಧ್ಯವಾದಷ್ಟು ಅವರಿಗೆ ನೆರವಾಗೋಣ. ಆಗ ನಮ್ಮ ಹಬ್ಬದ ಸಂತಸ ಇಮ್ಮಡಿಯಾಗಲಿದೆ. ಆ ಮೂಲಕ ನಮ್ಮ ರಮಝಾನ್, ನಮಾಝ್, ಕುರ್‌ಆನ್ ಪಾರಾಯಣ ಹಾಗೂ ಈದ್ ಅರ್ಥಪೂರ್ಣವಾಗಲಿವೆ. ಈ ಬಾರಿ ಈದುಲ್‌ಫಿತ್ರ್ ಅನ್ನು ವಿಭಿನ್ನವಾಗಿ ಆಚರಿಸೋಣ, ಇದ್ದುದರಲ್ಲೇ ಉತ್ತಮ ಬಟ್ಟೆಯನ್ನು ಧರಿಸೋಣ. ಹೊಸ ಬಟ್ಟೆ ಖರೀದಿಗೆ ಹೋಗದಿರೋಣ. ಪ್ರವಾದಿ ಮುಹಮ್ಮದ್ (ಸ.) ಅವರ ಆದರ್ಶಗಳ ನೈಜ ಅನುಯಾಯಿಗಳು ಎಂದು ಮತ್ತೊಮ್ಮೆ ಸಾಬೀತುಪಡಿಸೋಣ. ಇದು ಕೇವಲ ಮನವಿ ಮಾತ್ರ. ಮಸೀದಿಗಳು, ಜಮಾಅತ್‌ಗಳು, ಸಂಘಸಂಸ್ಥೆಗಳು ಸಂಘಟನೆಗಳು ಈ ನಿಟ್ಟಿನಲ್ಲಿ ಯಾರನ್ನು ಒತ್ತಡದಿಂದ ತಡೆಯಬಾರದು ಎಂದು ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.







