ಕುತ್ಪಾಡಿಯಲ್ಲಿ ಮತ್ತೆ ಕಡಲ್ಕೊರೆತ: ಐದಾರು ತೆಂಗು ಸಮುದ್ರಪಾಲಾಗುವ ಭೀತಿ

ಮಲ್ಪೆ, ಮೇ 7: ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕೆರೆ ಕುತ್ಪಾಡಿ ಎಂಬಲ್ಲಿ ಕಳೆದ ಎರಡು ದಿನಗಳಿಂದ ಮತ್ತೆ ಕಡಲ್ಕೊರೆತ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.
ಪಡುಕೆರೆಯ ಸಂಜೀವ ಸುವರ್ಣ ಎಂಬವರ ಮನೆ ಸಮೀಪ ಎ.26ರಂದು ಕಡಲು ಕೊರೆತ ಉಂಟಾಗಿ ಭೂಪ್ರದೇಶ ಸಮುದ್ರ ಪಾಲಾಗಿತ್ತು. ಅಲ್ಲದೆ ನಾಲ್ಕು ತೆಂಗಿನ ಮರಗಳು ಧರೆಗೆ ಉರುಳಿ ಬಿದ್ದಿದ್ದವು.
ಇದೀಗ ಕಡಲ್ಕೊರೆತ ಮತ್ತೆ ಕಾಣಿಸಿಕೊಂಡಿರುವುದರಿಂದ ಸಾಕಷ್ಟು ಭೂಭಾಗ ಸಮುದ್ರ ಪಾಲಾಗಿವೆ. ಸಮುದ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಅದೇ ರೀತಿ ಐದಾರು ತೆಂಗಿನಮರಗಳು ಸಮುದ್ರ ಪಾಲಾಗುವ ಭೀತಿಯಲ್ಲಿವೆ. ಮಳೆಗಾಲಕ್ಕೆ ಮುನ್ನವೇ ಈ ರೀತಿ ಕೊರೆತ ಕಂಡುಬಂದಿರುವುದು ಸ್ಥಳೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ
ಉದ್ಯಾವರ ಪಡುಕೆರೆಯಿಂದ ಕುತ್ಪಾಡಿ ಪಡುಕೆರೆಯವರೆಗೆ ಎಡಿಬಿಯಿಂದ ನಡೆದ ಶಾಶ್ವತ ತಡೆಗೋಡೆ ಕಾಮಗಾರಿಯೇ ಇದಕ್ಕೆ ಕಾರಣ ಎನ್ನಲಾಗಿದೆ. ಆದುದರಿಂದ ಇಲ್ಲಿ ಉಳಿದಿರುವ 300 ಮೀಟರ್ ನಷ್ಟು ತೀರದಲ್ಲಿ ಶಾಶ್ವತ ತಡೆಗೋಡೆ ಕಾಮಗಾರಿ ಕೂಡಲೇ ಪ್ರಾರಂಭಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.





