ಮಂಗಳೂರು: ತೆರೆಯದ ಮುಸ್ಲಿಮ್ ಮಾಲಕತ್ವದ ಬಟ್ಟೆ ಅಂಗಡಿಗಳು

ಸಾಂದರ್ಭಿಕ ಚಿತ್ರ
ಮಂಗಳೂರು, ಮೇ 7: ರಮಝಾನ್ ಮುಗಿಯುವವರೆಗೆ ಬಟ್ಟೆ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಬಾರದು ಎಂದು ಖಾಝಿಗಳು ಮತ್ತು ಮುಸ್ಲಿಮ್ ಮುಖಂಡರ ಮನವಿಗೆ ಪೂರಕವಾಗಿ ಮಂಗಳೂರಿನ ಮುಸ್ಲಿಮ್ ಮಾಲಕತ್ವದ ಬಟ್ಟೆಬರೆ ಅಂಗಡಿಗಳು ತೆರೆಯದಿರುವ ಮೂಲಕ ಗಮನ ಸೆಳೆದಿದೆ.
ಕೊರೋನ ಹಿನ್ನೆಲೆಯಲ್ಲಿ ಬಟ್ಟೆಬರೆ ಖರೀದಿ ಸಂದರ್ಭ ಸುರಕ್ಷಿತ ಅಂತರ ಕಾಪಾಡಲು ಸಾಧ್ಯವಾಗದು ಎಂದು ಮನಗಂಡ ಮುಸ್ಲಿಮ್ ವಿವಿಧ ಸಂಘಟನೆಗಳ ಮುಖಂಡರು ರಮಝಾನ್ ಮುಗಿಯುವವರೆಗೆ ಬಟ್ಟೆಬರೆ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಬಾರದು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಖಾಝಿಗಳು ಕೂಡ ಇದನ್ನೇ ಪುನರುಚ್ಚರಿಸಿದ್ದರು. ಅಲ್ಲದೆ ಅತ್ಯಂತ ಸರಳವಾಗಿ ಈದುಲ್ ಫಿತ್ರ್ ಹಬ್ಬ ಆಚರಿಸಲು ಕರೆ ನೀಡಿದ್ದರು. ಮುಸ್ಲಿಮರು ಕೂಡ ಇದಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದರು. ಮುಸ್ಲಿಮ್ ಜವುಳಿ ವ್ಯಾಪಾರಸ್ಥರು ಕೂಡ ರಮಝಾನ್ ಮುಗಿಯುವವರೆಗೆ ಬಟ್ಟೆಬರೆ ಅಂಗಡಿಗಳನ್ನು ತೆರೆಯುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಆದಾಗ್ಯೂ ರಮಝಾನ್ ಈದುಲ್ ಫಿತ್ರ್ನ ಭರಪೂರ ವ್ಯಾಪಾರವನ್ನು ಕಳಕೊಳ್ಳಲು ಇಷ್ಟಪಡದ ಕೆಲವು ಜವುಳಿ ವ್ಯಾಪಾರಸ್ಥರು ಬಟ್ಟೆಬರೆ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಿದ್ದರು. ರಮಝಾನ್ ಸಂದರ್ಭದ ಬಟ್ಟೆಬರೆ ಖರೀದಿಯ ವೇಳೆ ಸುರಕ್ಷಿತ ಅಂತರ ಕಾಪಾಡಲು ಅಸಾಧ್ಯ ಎಂದು ತಿಳಿದಿದ್ದರೂ ಕೂಡ ಜಿಲ್ಲಾಡಳಿತ ನೆಪ ಮಾತ್ರಕ್ಕೆ ಒಂದರೆಡು ಷರತ್ತುಗಳನ್ನು ವಿಧಿಸಿ ಗುರುವಾರದಿಂದ ಬಟ್ಟೆಬರೆ ಅಂಗಡಿ ತೆರೆಯಲು ಅವಕಾಶ ಕಲ್ಪಿಸಿದೆ. ಆದರೆ ಮಂಗಳೂರು, ತೊಕ್ಕೊಟ್ಟು, ದೇರಳಕಟ್ಟೆ ಮತ್ತಿತರ ಕಡೆಯ ಮುಸ್ಲಿಮ್ ವ್ಯಾಪಾರಿಗಳು ಜವುಳಿ ಮಳಿಗೆಗಳನ್ನು ಗುರುವಾರ ತೆರೆಯದೆ ಕೊರೋನ ತಡೆಗಾಗಿ ಸ್ವಯಂ ಸಂಯಮ ಮೆರೆದಿದ್ದಾರೆ.
ಗುರುವಾರ ನಗರದ ಬಹುತೇಕ ಮುಸ್ಲಿಮ್ ಮಾಲಕತ್ವದ ಜವುಳಿ ಅಂಗಡಿಗಳು ತೆರೆದಿರಲಿಲ್ಲ. ಮುಸ್ಲಿಮರು ಕೂಡ ಬಟ್ಟೆಗಳನ್ನು ಖರೀದಿಸಲು ಆಸಕ್ತಿ ವಹಿಸಲಿಲ್ಲ. ಸುರಕ್ಷಿತ ಅಂತರ ಕಾಪಾಡದಿದ್ದರೆ ಕೊರೋನ ವೈರಸ್ ಹರಡಿ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳುವ ಮೂಲಕ ವಿವಿಧ ಸಂಘಟನೆಗಳು, ಧಾರ್ಮಿಕ ಗುರುಗಳು ಜಮಾಅತ್ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾಡಳಿತದ ಆತುರದ ನಿರ್ಧಾರ ಮತ್ತು ಖಾಝಿಗಳ ಮನವಿಗೆ ಸ್ಪಂದಿಸದಿರುವ ಬಗ್ಗೆ ವ್ಯಾಪಕ ಚರ್ಚೆಯೂ ನಡೆಯುತ್ತಿದೆ.







