ಬಟ್ಟೆಬರೆ ಅಂಗಡಿ ತೆರೆಯಲು ಅನುಮತಿ: ಪುನರ್ ಪರಿಶೀಲನೆಗೆ ಮನವಿ

ಮಂಗಳೂರು, ಮೇ 7: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಬಟ್ಟೆಬರೆ ಅಂಗಡಿಗಳನ್ನು ತೆರೆಯಲು ತಾನು ನೀಡಿದ್ದ ಅನುಮತಿಯನ್ನು ಪುನಃ ಪರಿಶೀಲಿಸಬೇಕು ಎಂದು ನಗರದ ಹಂಪನಕಟ್ಟೆಯ ವ್ಯಾಪಾರಿ ಸಂಘಟನೆಯಾದ ಕೆಟಿಎ ಯೂತ್ ಫೋರಂ ಇದರ ನಿಯೋಗವು ಗುರುವಾರ ದ.ಕ. ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ರಮಝಾನ್ ಮುಗಿಯುವವರೆಗೆ ಯಾವುದೇ ಬಟ್ಟೆಬರೆ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಬಾರದು. ಮುಸ್ಲಿಮರು ರಮಝಾನ್ ತಿಂಗಳಲ್ಲಿ ಹೊಸ ಬಟ್ಟೆಬರೆ ಖರೀದಿಗೆ ಮುಗಿಬೀಳುತ್ತಾರೆ. ಈ ಸಂದರ್ಭ ಸುರಕ್ಷಿತ ಅಂತರ ಕಾಪಾಡಲು ಸಾಧ್ಯವಿಲ್ಲ. ಹಾಗಾಗಿ ಯಾವ ಕಾರಣಕ್ಕೂ ಬಟ್ಟೆಬರೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಬಾರದು. ಈಗಾಗಲೇ ನೀಡಿದ ಅವಕಾಶದ ಬಗ್ಗೆ ಪುನಃ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ ಕೆಟಿಎ ಸಂಘಟನೆಯ ಮುಖಂಡರು ಒತ್ತಾಯಿಸಿದರು.
ಈ ಸಂದರ್ಭ ಕೆಟಿಎ ಸಂಘಟನೆಯ ಮುಖಂಡರಾದ ಮೌಶೀರ್ ಅಹ್ಮದ್ ಸಾಮಣಿಗೆ, ಸಿರಾಜ್ ಅಭಯ, ಇರ್ಫಾನ್ ಕುದ್ರೋಳಿ, ರಹ್ಮಾನ್ ಸಾಗರ್, ನೌಷಾದ್ ಬಂಟ್ವಾಳ, ರಾಝಿಕ್, ರಿಯಾಝ್ ಆರ್‌ಕೆ, ರಶೀದ್, ಸಿದ್ದೀಕ್ ಉಪಸ್ಥಿತರಿದ್ದರು.





