ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ಆಗಮನ ಪ್ರಕ್ರಿಯೆ ಶೀಘ್ರವೇ ಪ್ರಾರಂಭ: ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು, ಮೇ 7: ವಿದೇಶದಲ್ಲಿ ಸಿಲುಕಿರುವ ಕನ್ನಡಿಗರು ಶೀಘ್ರದಲ್ಲೆ ನಗರಕ್ಕೆ ಆಗಮಿಸುವ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಅದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರ ಲಾಕ್‍ಡೌನ್ ನಿಯಮಗಳಲ್ಲಿ ಸಡಿಲ ಮಾಡಿದೆ ಎಂದರೆ ಕೊರೋನ ಇಲ್ಲ ಎಂದು ಅರ್ಥವಲ್ಲ. ವೈರಸ್ ಜೊತೆಯಲ್ಲಿ ನಾವು ಜೀವನ ನಡೆಸಬೇಕಾದ ಅನಿವಾರ್ಯತೆ ಇದ್ದು ಸರಕಾರದ ಮಾರ್ಗಸೂಚಿಗಳನ್ನು ಜನರು ಚಾಚೂ ತಪ್ಪದೆ ಪಾಲಿಸಬೇಕು ಎಂದರು.
ಸರಕಾರ ಉತ್ತಮವಾದ ಆರ್ಥಿಕ ಪ್ಯಾಕೇಜ್ ನೀಡಿದ್ದು, ಸಂಪನ್ಮೂಲ ಲಭ್ಯತೆಯ ಆಧಾರದ ಮೇಲೆ ಇನ್ನೂ ಹೆಚ್ಚಿನ ನೆರವನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗುವುದು ಎಂದು ಸುಧಾಕರ್ ತಿಳಿಸಿದರು.
ಕ್ವಾರಂಟೈನ್ ಹೊಸ ಅನುಭವ
ಕ್ವಾರಂಟೈನ್ ಒಂದು ಹೊಸ ಅನುಭವ ನೀಡಿದ್ದು, ಕೆಲಸ ಮಾಡಲು ಮತ್ತಷ್ಟು ಹೊಸ ಚೈತನ್ಯ ನೀಡಿದೆ. ಇನ್ನು ಮುಂದೆ ಎಚ್ಚರಿಕೆಯಿಂದ ಎರಡುಪಟ್ಟು ಹೆಚ್ಚು ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ಅವರು ಹೇಳಿದರು.
ಕಳೆದ ಎಪ್ರಿಲ್ 22ರಂದು ಹೆಬ್ಬಾಳದಲ್ಲಿ ಬಡವರಿಗೆ ಅಗತ್ಯ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸಹೋದ್ಯೋಗಿ ಸಚಿವರೊಂದಿಗೆ ಭಾಗವಹಿಸಿದ್ದಾಗ ಸೋಂಕಿತನ ಸಂಪರ್ಕಕಕ್ಕೆ ಒಳಗಾಗಿದ್ದು, ತಾವೆಲ್ಲರೂ ಮಾಸ್ಕ್ ಧರಿಸಿದ್ದರಿಂದ ಅಪಾಯವಿಲ್ಲವೆಂದು ತಮಗೆ ಮೊದಲೆ ಅರಿವಿತ್ತು. ಜನರಿಗೆ ತಪ್ಪು ಸಂದೇಶ ರವಾನೆ ಆಗಬಾರದೆಂದು ಸ್ವಯಂಪ್ರೇರಿತ ಕ್ವಾರಂಟೈನ್‍ಗೆ ಒಳಪಡಿಸಿಕೊಂಡಿದ್ದೆ.
-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ







