ಜ್ಯಬಿಲಿಯಂಟ್ ಕಂಪನಿಯ ಕೊರೋನ ತನಿಖೆ ವಿಚಾರದಲ್ಲಿ ಸರ್ಕಾರದ ಕೈವಾಡವಿಲ್ಲ: ಸಚಿವ ಸೋಮಶೇಖರ್

ಮೈಸೂರು,ಮೇ.7: ನಂಜನಗೂಡಿನ ಜ್ಯಬಿಲಿಯಂಟ್ ಕಂಪನಿಯ ಕೊರೋನ ಸೋಂಕು ಪತ್ತೆ ಹಚ್ಚುವ ತನಿಖೆ ವಿಚಾರದಲ್ಲಿ ಸರ್ಕಾರದ ಕೈವಾಡ ಇಲ್ಲ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಫೇಸ್ ಬುಕ್ ಲೈವ್‍ನಲ್ಲಿ ಮಾತನಾಡುತ್ತಿದ್ದ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಜ್ಯಬಿಲಿಯಂಟ್ ಇಂಟರ್ ನ್ಯಾಷನಲ್ ಮಟ್ಟದಲ್ಲಿ ವ್ಯವಹರಿಸುತ್ತಿರುವ ಕಂಪನಿ. ಸ್ಥಳೀಯ ಶಾಸಕ ಹರ್ಷವರ್ಧನ್ ಅವರು ಐಎಎಸ್ ಅಧಿಕಾರಿ ಹರ್ಷಗುಪ್ತ ಅವರಿಂದ ತನಿಖೆ ಮಾಡಿಸುವಂತೆ ನನ್ನ ಬಳಿ ಹೇಳಿದ್ದರು. ಅದರಂತೆ ನಾನು ಮುಖ್ಯಮಂತ್ರಿಗಳ ಜೊತೆ ಮಾತನಾಡಿ, ಹೇಗಿದ್ದರೂ ಕೋವಿಡ್-19 ತನಿಖೆಗೆ ಹರ್ಷಗುಪ್ತ ಅವರನ್ನು ನೇಮಿಸಿದ್ದೀರಿ. ಜ್ಯಬಿಲಿಯಂಟ್ ವಿಚಾರಣೆಯನ್ನು ಅವರಿಂದಲೇ ಮಾಡಿಸಿ ಎಂದು ಮನವಿ ಮಾಡಿದ್ದೆ. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಹರ್ಷಗುಪ್ತ ಅವರನ್ನು ನೇಮಿಸಿದ್ದರು ಎಂದು ಹೇಳಿದರು.
ಇದಾದ ನಂತರ ಹರ್ಷಗುಪ್ತ ಅವರು ನನಗೆ ದೂರವಾಣಿ ಕರೆ ಮಾಡಿ ಈ ಘಟನೆ ನಡೆದು ಒಂದೂವರೆ ತಿಂಗಳಾಗಿರುವುದರಿಂದ ತನಿಖೆ ಸಾಧ್ಯವಿಲ್ಲ ಎಂದು ಚರ್ಚಿಸಿದ್ದರು ಎಂದರು.
ಮೊದಲಿಗೆ ಚೀನಾದಿಂದ ಬಂದ ಕಂಟೈನರ್ ಮೂಲಕ ಸೋಂಕು ಹರಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಅದು ಪರೀಕ್ಷೆ ನಂತರ ನೆಗೆಟಿವ್ ಬಂತು. ನಾನು ಗಮನಿಸಿರುವ ಪ್ರಕಾರ ಮೂರು ಅಂಶವನ್ನು ಅಂದಾಜಿಸಲಾಗಿದೆ. ಒಂದು ಜ್ಯಬಿಲಿಯಂಟ್ ಕಂಪನಿಗೆ ದೆಹಲಿಯಿಂದ ಬಂದಿದ್ದ ಆಡಿಟರ್ಸ್‍ಗಳಿಂದ ಬಂದಿರಬೇಕು, ಅಥವಾ ಕಂಪನಿಯ ಇತರೆ ಅಧಿಕಾರಿಗಳು ದೆಹಲಿ ಸೇರಿದಂತೆ ಬೇರೆ ಊರುಗಳಿಗೆ ಹೋಗಿದ್ದಾರೆ. ಕೊರೋನ ಸೋಂಕಿತ ನೌಕರ ಬೆಂಗಳೂರಿನ ತಣಿಸಂದ್ರಕ್ಕೆ ಭೇಟಿ ನೀಡಿದ್ದರು. ಇವೆಲ್ಲವನ್ನು ಕೂಲಂಕುಶವಾಗಿ ಪರಿಶೀಲಿಸಿದ ನಂತರ ಈ ಮೂರು ಕಡೆಗಳಲ್ಲಿ ಎಲ್ಲಿಂದಾದರೂ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಇದರಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ ಎಂದು ಹೇಳಿದರು.
ಸ್ಥಳೀಯ ಶಾಸಕರ ಒತ್ತಾಯಕ್ಕಾಗಿ ಹರ್ಷಗುಪ್ತ ಅವರನ್ನು ನೇಮಿಸಲಾಗಿತ್ತು. ಈ ವಿಚಾರವಾಗಿ ಸರ್ಕಾರ ಮುಚ್ಚಿಹಾಕುವ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಹೇಳಿದರು.
ಇದೇ ವೇಳೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಉಪಸ್ಥಿತರಿದ್ದರು.







