ಬೆಂಗಳೂರಿನಲ್ಲಿ ಗುರುವಾರ ಏಳು ಕೊರೋನ ಪ್ರಕರಣಗಳು ದೃಢ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 7: ನಗರದಲ್ಲಿ ಗುರುವಾರ ಹೊಸದಾಗಿ ಏಳು ಕೊರೋನ ಪ್ರಕರಣಗಳು ದಾಖಲಾಗಿದ್ದು, ಮಲ್ಲೇಶ್ವರನ ವ್ಯಾಪ್ತಿಯ ಓರ್ವ ಮಹಿಳೆ, ಶಿವಾಜಿನಗರದಲ್ಲಿ ನಾಲ್ಕು ಹಾಗೂ ಪಾದರಾಯನಪುರದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ.
ಶಿವಾಜಿನಗರ ಹೋಟೆಲ್ನಲ್ಲಿ ಕೆಲಸಕ್ಕೆ ಮಾಡುತ್ತಿದ್ದ ಏಳು ಜನರಲ್ಲಿ ನಾಲ್ಕು ಜನರಿಗೆ ಕೊರೋನ ಸೋಂಕು ಪತ್ತೆಯಾಗಿದ್ದು, ಇವರನ್ನು ವಿಕ್ಟೋರಿಯಾ ಆಸ್ಪತ್ರೆ ಸೇರಿಸಲಾಗಿದೆ.
ವರದಿ ಅದಲು ಬದಲು: ಕೋವಿಡ್ ಪರೀಕ್ಷಾ ವರದಿ ಅದಲು ಬದಲಾಗಿ ಪೊಲೀಸ್ ಕಾನ್ಸ್ಟೇಬಲ್ ಹಾಗೂ ಅವರ ಮನೆಯವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಬಳಿಕ ಅವರ ವರದಿಯನ್ನು ಮರು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದಿನ ವರದಿಯಲ್ಲಿ ನೆಗೆಟಿವ್ ಎಂದು ಬಂದಿದೆ. ಆರೋಗ್ಯ ಇಲಾಖೆ ಕೊಟ್ಟ ಮಾಹಿತಿ ಹಿನ್ನೆಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಕೊರೋನ ಪಾಸಿಟಿವ್ ಹೇಳಿ ಕುಟುಂಬದ ಗೌರವಕ್ಕೆ ಧಕ್ಕೆ ಆಗಿದೆ ಎಂದು ಪ್ರಕರಣ ದಾಖಲಿಸಿ, ಕಾನೂನು ಹೋರಾಟ ಮಾಡುವುದಾಗಿ ಕುಟುಂಬದವರು ತಿಳಿಸಿದ್ದಾರೆ.
ಬೇಗೂರು ವಾರ್ಡ್ ಕಂಟೈನ್ಮೆಂಟ್ ತೆರವು:
ಪೊಲೀಸ್ ಪೇದೆ ರಿಪೋರ್ಟ್ ನೆಗೆಟಿವ್ ಕೇಸ್ ಬಂದ ಹಿನ್ನೆಯ ಪೇದೆಯ ಪ್ರಾಥಮಿಕ ಸಂಪರ್ಕದ 2 ಜನ ಹಾಗೂ ಸೆಕೆಂಡರಿ 12 ಜನರನ್ನು ಕಾರಂಟೈನ್ನಿಂದ ಬಿಡುಗಡೆ ಮಾಡಲಾಗಿದ್ದು, ವಾರ್ಡನ್ನು ಕೂಡಾ ಕಂಟೈನ್ಮೆಂಟ್ ಮುಕ್ತ ಮಾಡಲಾಗಿದೆ.
ಗರ್ಭಿಣಿಗೆ ಮುಂದುವರಿದ ಚಿಕಿತ್ಸೆ: ವಿಕ್ಟೋರಿಯಾ ಆಸ್ಪತ್ರೆ ದಾಖಲಿಸಲಾಗಿದ್ದ ಬಿಟಿಎಂ ಲೇಔಟ್ನ ಗರ್ಭಿಣಿ ಮಹಿಳೆಯ ವರದಿ ಕೂಡಾ ನೆಗೆಟಿವ್ ಬಂದಿದೆ. ಆದರೂ, ಮತ್ತೆ 14 ದಿನ ಐಸೋಲೇಷನ್ ವಾರ್ಡ್ನಲ್ಲಿ ಇರಬೇಕಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೋನ ರೋಗಿಗಳಿದ್ದ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಈಗ ಖಾಸಗಿ ಆಸ್ಪತ್ರೆಯಲ್ಲಿ ಐಸೋಲೇಷನ್ ವ್ಯವಸ್ಥೆ ಮಾಡಿ ಹೆರಿಗೆಯಾಗುವವರೆಗೆ ಗರ್ಭಿಣಿಯ ಆರೋಗ್ಯ ನೋಡಿಕೊಳ್ಳಲಾಗುತ್ತಿದೆ.
ನಗರದಲ್ಲಿ 162 ಪ್ರಕರಣ ಪತ್ತೆ:
ನಗರದಲ್ಲಿ ಇಲ್ಲಿಯವರೆಗೆ 162 ಪ್ರಕರಣ ದಾಖಲಾಗಿದ್ದು, 77 ಜನರು ಗುಣಮುಖರಾಗಿದ್ದು, 72 ಜನರು ಸಕ್ರಿಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಗಳಲ್ಲಿ ಒಟ್ಟು 6,804 ವ್ಯಕ್ತಿಗಳ ತಪಾಸಣೆ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿರುವ ಒಟ್ಟು 1,112 ಜನರು ಹಾಗೂ ಸೆಕೆಂಡರಿ ಸಂಪರ್ಕದಲ್ಲಿರುವ 4,824 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.







