ಕಾರ್ಮಿಕರನ್ನು ಕಳುಹಿಸಿ ಕೊಡುವ ಸಂಬಂಧ ಆಯಾ ರಾಜ್ಯಗಳಿಗೆ ಪತ್ರ: ಸಚಿವ ಆರ್.ಅಶೋಕ್

ಬೆಂಗಳೂರು, ಮೇ 7: ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಹೊರರಾಜ್ಯಗಳ ಕಾರ್ಮಿಕರನ್ನು ವಿಶೇಷ ರೈಲು ಮೂಲಕ ಅವರ ಊರುಗಳಿಗೆ ಕಳುಹಿಸಿ ಕೊಡುವ ಸಂಬಂಧ ಆಯಾ ರಾಜ್ಯಗಳಿಗೆ ಪತ್ರ ಬರೆದಿದ್ದು, ಅವರ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ. ಅವರು ಸಮ್ಮತಿಸಿದೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಲಸೆ ಕಾರ್ಮಿಕರಿಗಾಗಿ ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಒರಿಸ್ಸಾ ಸೇರಿದಂತೆ ಇತರೆ ರಾಜ್ಯಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಆದರೆ, ಬಿಹಾರ ಹೊರತು ಪಡಿಸಿ ಇನ್ನುಳಿದ ಯಾವುದೇ ರಾಜ್ಯಗಳಿಂದ ಪ್ರತಿಕ್ರಿಯೆ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಬಿಹಾರ ಸರಕಾರ ದೊಡ್ಡ ಪ್ರಮಾಣದ ಕಾರ್ಮಿಕರನ್ನು ಒಮ್ಮೆಗೆ ಕಳುಗಿಸಬೇಡಿ ಎಂದು ಕೋರಿದೆ. ದಿನಕ್ಕೆ ಒಂದು ರೈಲಿನಲ್ಲಿ ಮಾತ್ರ ಕಳಿಸಿದರೆ ಕಾರ್ಮಿಕರನ್ನು ಕ್ವಾರೆಂಟೈನ್‍ನಲ್ಲಿಡಲು ವ್ಯವಸ್ಥೆ ಮಾಡಬಹುದು. ಒಂದು ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಕಳುಹಿಸಿದರೆ ತುಂಬಾ ಸಮಸ್ಯೆಯಾಗಲಿದೆ ಎಂದು ಹೇಳಿದೆ. ಹೀಗಾಗಿ ಅವರ ಕೋರಿಗೆ ಆಧರಿಸಿ ಕಾರ್ಮಿಕರನ್ನು ಕಳುಹಿಸಲಾಗುವುದು ಎಂದರು.
ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸುವ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿದೆ. ಇದು ಸರಿಯಲ್ಲ. ಯಾರನ್ನು ನಾವು ಯಾವುದೆ ಕಾರಣಕ್ಕೂ ಬಲವಂತವಾಗಿ ಇಟ್ಟುಕೊಳ್ಳುವ ಪ್ರಶ್ನೆ ಇಲ್ಲ. ಕೆಲ ನಿಯಮಗಳನ್ನು ಸರಕಾರ ಅನುಸರಿಸಬೇಕಾಗುತ್ತದೆ ಎಂದು ಅಶೋಕ್ ತಿರುಗೇಟು ನೀಡಿದರು.
ವಿಶೇಷ ರೈಲುಗಳು: ನಾಳೆ(ಮೇ 8)ಯಿಂದ ಮೇ 15ರ ವರೆಗೆ ವಲಸೆ ಕಾರ್ಮಿಕರಿಗಾಗಿ ವಿಶೇಷ ರೈಲುಗಳು ಪ್ರಯಾಣಿಸಲಿವೆ. ಬಿಹಾರ ಒಂದು ರೈಲಿಗೆ ಅನುಮತಿ ನೀಡಲಾಗಿದ್ದು, ವಲಸಿಗ ಕಾರ್ಮಿಕರನ್ನು ಶುಕ್ರವಾರ ಕಳುಹಿಸಿಕೊಡಲಾಗುತ್ತಿದೆ ಎಂದು ಸಚಿವ ಆರ್.ಅಶೋಕ್ ಇದೇ ವೇಳೆ ಮಾಹಿತಿ ನೀಡಿದರು.
ಉಳಿದ ರಾಜ್ಯಗಳಿಂದ ಅನುಮತಿ ನಿರೀಕ್ಷೆಯಲ್ಲಿದ್ದು, ಜಾರ್ಖಂಡ್, ಉತ್ತರ ಪ್ರದೇಶಕ್ಕೆ ಎರಡು, ಮಣಿಪುರ, ತ್ರಿಪುರಾ, ಪಶ್ಚಿಮಬಂಗಾಳ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಓರಿಸ್ಸಾಗೆ ತಲಾ ಒಂದೊಂದು ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ಅಶೋಕ್ ಇದೇ ವೇಳೆ ತಿಳಿಸಿದರು.







