ಬೆಂಗಳೂರು: ಕೊರೋನ ವಿಚಾರದಲ್ಲಿ ಆರೋಗ್ಯಾಧಿಕಾರಿಯ ಎಡವಟ್ಟು, ಪೊಲೀಸ್ ಸಿಬ್ಬಂದಿ ನಿರಾಳ
ಬೆಂಗಳೂರು, ಮೇ 7: ಇಲ್ಲಿನ ಬೇಗೂರು ಠಾಣೆಯ ಪೇದೆಯೊಬ್ಬರಿಗೆ ಕೊರೋನ ಸೋಂಕು ಪತ್ತೆಯಾದ ಕಾರಣ ಅವರನ್ನು ಚಿಕಿತ್ಸೆಗೊಳಪಡಿಸಿ, ಅವರ ಜತೆಗಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಆದರೆ, ಆರೋಗ್ಯಾಧಿಕಾರಿಗಳ ಎಡವಟ್ಟಿನಿಂದ ಪೊಲೀಸ್ ಸಿಬ್ಬಂದಿಯನ್ನು ಸೊಂಕಿತರ ಪಟ್ಟಿಗೆ ಸೇರಿಸಿರುವುದು ಕಂಡು ಬಂದಿದ್ದು, ಸದ್ಯ ಪೇದೆಗೆ ಕೊರೋನ ಸೋಂಕು ಪತ್ತೆಯಾಗದೇ ಇರುವುದು ದೃಢಪಟ್ಟ ಹಿನ್ನೆಲೆ ಆಗ್ನೇಯ ವಿಭಾಗದ ಪೊಲೀಸರು ನಿರಾಳರಾಗಿದ್ದಾರೆ.
ನಗರದ ಹೊಂಗಸಂದ್ರದ ಬಳಿ ಬಿಹಾರಿ ಕೂಲಿ ಕಾರ್ಮಿಕರಲ್ಲಿ ಕೊರೋನ ಸೋಂಕು ಕಾಣಿಸಿಕೊಂಡ ಕಾರಣಕ್ಕಾಗಿ ಈ ಪ್ರದೇಶದ ವ್ಯಾಪ್ತಿಯಲ್ಲಿ ಸೀಲ್‍ಡೌನ್ ಮಾಡಲಾಗಿತ್ತು. ಹೀಗಾಗಿ ಆಗ್ನೇಯ ವಿಭಾಗದ ಡಿಸಿಪಿ ನೇತೃತ್ವದ ತಂಡ ಸೀಲ್‍ಡೌನ್ ಪ್ರದೇಶದ ಭದ್ರತೆ ಹೊಣೆ ಹೊತ್ತಿದ್ದರು. ಬಳಿಕ, ಎಲ್ಲ ಸಿಬ್ಬಂದಿಯನ್ನು ಕೊರೋನ ತಪಾಸಣೆಗೆ ಒಳಪಡಿಸಿದಾಗ ಭದ್ರತೆಗೆ ತೆರಳಿದ ಬೇಗೂರು ಠಾಣೆಯ ಪೊಲೀಸ್ ಪೇದೆಗೆ ಕೊರೋನ ಸೋಂಕು ಪತ್ತೆಯಾಗಿದೆ ಎಂದು ಮೊದಲು ಆರೋಗ್ಯಾಧಿಕಾರಿಗಳು ತಿಳಿಸಿದ್ದರು.
ಎರಡನೆ ಬಾರಿ ಪರೀಕ್ಷೆ ಮಾಡಿದಾಗ ಸೋಂಕು ತಗುಲಿಲ್ಲ, ಬೇರೆ ವ್ಯಕ್ತಿಗೆ ಬಂದಿರುವ ಸೋಂಕು ಪೇದೆಗೆ ಬಂದಿರುವುದಾಗಿ ಮೊದಲ ವರದಿ ನೀಡಿರುವುದು ದೃಢಪಟ್ಟಿತ್ತು. ಹೀಗಾಗಿ ಎಲ್ಲ ಹಿರಿಯ ಅಧಿಕಾರಿಗಳು ನಿರಾಳರಾಗಿದ್ದಾರೆ.
ಸದ್ಯ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪೇದೆಗೆ ಹಾಗೂ ಆಗ್ನೇಯ ವಿಭಾಗದ ಸಿಬ್ಬಂದಿಗೆ ಅಭಯ ನೀಡಿದ್ದಾರೆ. ಪೇದೆಗೆ ಮತ್ತೆ ಕೆಲಸ ಮುಂದುವರೆಸುವಂತೆ ತಿಳಿಸಿದ್ದಾರೆ.





