ಕೊರೋನ: ಏಳು ಜಿಲ್ಲೆಗಳಲ್ಲಿ ಇ-ರೌಂಡ್ಸ್ ನಡೆಸಲು ಮಣಿಪಾಲ್ ಆಸ್ಪತ್ರೆ ಸಹಕಾರ
ಬೆಂಗಳೂರು, ಮೇ 7: ಕೊರೋನದಿಂದ ಬಳಲುತ್ತಿರುವ ರಾಜ್ಯದ ಏಳು ಜಿಲ್ಲೆಯ ರೋಗಿಗಳಿಗೆ ಇ-ರೌಂಡ್ಸ್ ಗಳನ್ನು ನಡೆಸುವುದರ ಮೂಲಕ ರಾಜ್ಯ ಸರಕಾರಕ್ಕೆ ಬೆಂಬಲ ನೀಡುವುದರ ಸಲುವಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಮುಂದಾಗಿದ್ದು, ಅದಕ್ಕಾಗಿ ವಾರ್ ರೂಂ ಸಜ್ಜುಗೊಳಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಆಯುಕ್ತರು ಮತ್ತು ಸರಕಾರ ನೇಮಿಸಿದ ವೈದ್ಯರು ಈ ಉಪಕ್ರಮದಲ್ಲಿ ಸೇರಿದ್ದು, ಜಿಲ್ಲೆಗಳಲ್ಲಿ ವಿಶೇಷತಜ್ಞರೊಂದಿಗೆ ವರ್ಚುವಲ್ ಆರೋಗ್ಯ ಸುತ್ತುಗಳನ್ನು ನಡೆಸಲು ಅವಕಾಶ ಮಾಡಿಕೊಡಲಿದ್ದಾರೆ.
ಪ್ರತಿ ದಿನ ಬೆಳಗ್ಗೆ 11 ಗಂಟೆ ಮತ್ತು ಸಂಜೆ 6 ಗಂಟೆಗೆ ವರ್ಚುವಲ್ ವ್ಯವಸ್ಥೆ ಮೂಲಕ ಆನ್‍ಲೈನ್‍ನಲ್ಲಿ ಒಂದಾಗಿ ಸೇರಿ ಎಸ್‍ಎಆರ್‍ಐ(ತೀವ್ರ ರೀತಿಯ ಉಸಿರಾಟದ ಅಸ್ವಸ್ಥತೆ) ಪ್ರಕರಣಗಳನ್ನು ಹಾಗೂ ಐಎಲ್‍ಐ(ಇನ್‍ಫ್ಲ್ಯೂಯೆನ್ಜ್ ರೀತಿಯ ರೋಗಗಳು) ಪ್ರಕರಣಗಳನ್ನು 7 ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮೌಲ್ಯಿಕರಣ ನಡೆಸುತ್ತಿದ್ದಾರೆ.
ಬೆಳಗಾವಿ, ಬೀದರ್, ಕಲಬುರಗಿ, ವಿಜಯಪುರ, ಗದಗ, ದಕ್ಷಿಣ ಕನ್ನಡ ಮತ್ತು ದಾವಣಗೆರೆ ಜಿಲ್ಲೆಗಳು ಈ ವ್ಯಾಪ್ತಿಗೆ ಬರಲಿವೆ. ಇದುವರೆಗೆ 570ಕ್ಕೂ ಹೆಚ್ಚಿನ ಪ್ರಕರಣಗಳ ವಿಶ್ಲೇಷಣೆ ನಡೆದಿವೆ. ವೆಂಟಿಲೇಷನ್, ಡಯಾಲಿಸಿಸ್, ಇನೋ ಥ್ರೋಪ್ಸ್ ಮತ್ತು ಥಂಬಾಲಿಸಿಸ್ ಕ್ರಮಗಳನ್ನು ನಡೆಸಲಾಗಿದೆ. 160 ಗಂಭೀರವಾಗಿ ಅಸ್ವಸ್ಥರಾಗಿರುವ ಪ್ರಕರಣಗಳಲ್ಲಿ 40 ವ್ಯಕ್ತಿಗಳು ಚೇತರಿಸಿಕೊಂಡಿರುತ್ತಾರೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಐಎಎಸ್ ಅಧಿಕಾರಿ ಡಾ. ತ್ರಿಲೋಕ್ ಚಂದ್ರ ಮಾತನಾಡಿ, ಬೆಂಗಳೂರಿನಲ್ಲಿರುವ ವಾರ್‍ರೂಮ್, ರಾಜ್ಯದಲ್ಲಿನ ಪ್ರತಿಯೊಬ್ಬ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಕೇಸ್ ಶೀಟ್‍ನ ನಕಲನ್ನು ಹೊಂದಿರುತ್ತದೆ. ಪರಿಣತರ ತಂಡ ಸ್ಥಳೀಯ ವೈದ್ಯರೊಂದಿಗೆ ದಿನಕ್ಕೆ ನಾಲ್ಕು ಬಾರಿ ಸಂವಾದ ನಡೆಸುತ್ತದೆ. ಪ್ರತಿರೋಗಿಗೆ ನೀಡಲಾಗುತ್ತಿರುವ ಚಿಕಿತ್ಸೆಯನ್ನು ಗಮನಿಸುತ್ತದೆ ಎಂದರು.
ಬೆಂಗಳೂರು ಮಣಿಪಾಲ್ ಆಸ್ಪತ್ರೆಯ ಶ್ವಾಸಕೋಶ ರೋಗಶಾಸ್ತ್ರ ಶಸ್ತ್ರಕ್ರಿಯಾ ವಿಭಾಗದ ಮುಖ್ಯಸ್ಥರಾದ ಡಾ. ಸತ್ಯನಾರಾಯಣ ಮೈಸೂರು ಮಾತನಾಡಿ, ಕೋವಿಡ್-19ರ ರೋಗಿಗಳ ಸಾವಿನ ಸಂಖ್ಯೆಯನ್ನು ಕಡಿತಗೊಳಿಸಲು ಈ ಖಾಸಗಿ-ಸರಕಾರಿ ಪಾಲುದಾರಿಕೆಗೆ ದಿನಕ್ಕೆ ಸುಮಾರು ಆರು ಗಂಟೆಗಳ ಸಮಯ ಹಿಡಿಯುತ್ತಿದೆ. ನಮ್ಮ ನಿಗದಿತ ವೈದ್ಯಕೀಯ ಆರೈಕೆಗೆ ಹೆಚ್ಚುವರಿಯಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.







