ಸಿಎಂ ನಿಧಿಗೆ 1.47 ಕೋ.ರೂ. ದೇಣಿಗೆ ನೀಡಿದ ಉ.ಪ್ರದೇಶ ಜಲ ನಿಗಮ ಉದ್ಯೋಗಿಗಳಿಗೆ 3 ತಿಂಗಳ ವೇತನ ನೀಡಿಲ್ಲ!
Twitter: @myogioffice
ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಸ್ಥಾಪಿಸಿದ ಕೋವಿಡ್-19 ಪರಿಹಾರ ನಿಧಿಗೆ ಎಪ್ರಿಲ್ 27ರಂದು 1.47 ಕೋಟಿ ರೂ. ದೇಣಿಗೆ ನೀಡಿದ್ದ ಉತ್ತರ ಪ್ರದೇಶ ಜಲ ನಿಗಮ್ ತನ್ನ ಸುಮಾರು 25,000 ಉದ್ಯೋಗಿಗಳಿಗೆ ಫೆಬ್ರವರಿ, ಮಾರ್ಚ್ ಹಾಗೂ ಎಪ್ರಿಲ್ ತಿಂಗಳ ವೇತನವನ್ನು ಇನ್ನೂ ಪಾವತಿಸಿಲ್ಲ. ನಿಗಮದ ಪಿಂಚಣಿದಾರರಿಗೂ ಈ ಅವಧಿಯ ಪಿಂಚಣಿ ದೊರಕಿಲ್ಲ ಎಂದು theprint.in ವರದಿ ಮಾಡಿದೆ.
ಇದೀಗ ನಿಗಮವು ತನ್ನ ಉದ್ಯೋಗಿಗಳ ವೇತನ ಕಡಿತಕ್ಕೂ ಮುಂದಾಗಿದೆಯೆನ್ನಲಾಗಿದೆ.
“ಉದ್ಯೋಗಿಗಳಿಗೆ ವೇತನ ನೀಡಲು ಹಣವಿಲ್ಲದ ನಿಗಮ ಕೋವಿಡ್ ಕೇರ್ ಫಂಡ್ಗೆ ಎಲ್ಲಿಂದ ಹಣ ನೀಡಿದೆ?'' ಎಂದು ಉತ್ತರ ಪ್ರದೇಶ ಜಲ ನಿಗಮ್ ಉದ್ಯೋಗಿಗಳ ಫೆಡರೇಶನ್ ಸಂಚಾಲಕ ಅಜಯ್ ಪಾಲ್ ಸೋಮವಂಶಿ ಪ್ರಶ್ನಿಸುತ್ತಾರೆ. ವೇತನ ಕಡಿತದ ಕುರಿತು ತಮಗೆ ಮಾಹಿತಿಯನ್ನೂ ನೀಡಿಲ್ಲ ಹಾಗೂ ವೇತನದ ಮೊತ್ತವನ್ನು ಕೋವಿಡ್ ಫಂಡ್ಗೆ ನೀಡುವ ಕುರಿತಂತೆ ತಮಗೆ ಲಿಖಿತ ಅಪೀಲನ್ನೂ ಮಾಡಲಾಗಿರಲಿಲ್ಲ ಎಂದು ಜಲ ನಿಗಮ್ ಉದ್ಯೋಗಿಗಳ ಸಂಚಾಲನಾ ಸಮಿತಿಯ ಮುಖ್ಯ ವಕ್ತಾರ ಡಿ ಪಿ ಮಿಶ್ರಾ ಹೇಳುತ್ತಾರೆ.
ಆದರೆ ಉದ್ಯೋಗಿಗಳ ಅನುಮತಿ ಪಡೆದೇ ಅವರ ವೇತನ ಕಡಿತ ಮಾಡಲು ನಿರ್ಧರಿಸಲಾಗಿದೆ ಎಂದು ನಿಗಮದ ಎಂಡಿ ವಿಕಾಸ್ ಗೋಥಲ್ವಲ್ ಹೇಳುತ್ತಾರೆ. ನಿಗಮದ ಉದ್ಯೋಗಿಗಳ ವೇತನವನ್ನು ಶೀಘ್ರದಲ್ಲಿಯೇ ಬಿಡುಗಡೆಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಅಶುತೋಷ್ ಟಂಡನ್ ಹೇಳಿದ್ದಾರೆ.