ಇತರೆ ಅಸಂಘಟಿತ ಕಾರ್ಮಿಕರಿಗೂ ನೆರವು ನೀಡುವಂತೆ ಆಗ್ರಹಿಸಿ ಸಿಐಟಿಯು ಮನವಿ
ಉಡುಪಿ, ಮೇ 8: ಕೋವಿಡ್19 ಲಾಕ್‌ಡೌನ್‌ನಿಂದ ಸಂತ್ರಸ್ಥರಾದ ಇತರೆ ಅಸಂಘಟಿತ ಕಾರ್ಮಿಕರಿಗೂ ನೆರವು ನೀಡುವಂತೆ ಆಗ್ರಹಿಸಿ ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಮೇ 7ರಂದು ಉಡುಪಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.
ಕೊರೋನ ವೈರಸ್ ಹಾವಳಿಯಿಂದ ಕಳೆದ 45 ದಿನಗಳಿಂದ ಸರಕಾರದ ಲಾಕ್‌ಡೌನ್ ಪರಿಣಾಮವಾಗಿ ದಿನದ ಆದಾಯಗಳಿಲ್ಲದೆ ಇರುವ ಕ್ಷೌರಿಕರು, ಅಗಸರು, ಕಟ್ಟಡ ಕಾರ್ಮಿಕರಿಗೆ ಸರಕಾರ 1610 ಕೋಟಿ ರೂ.ಗಳ ನೆರವು ಘೋಷಿಸಿರುವುದು ಸ್ವಾಗತಾರ್ಹ. ಅದೇ ರೀತಿಯಲ್ಲಿ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳಲ್ಲಿ ದಿನದ 15-16 ಗಂಟೆ ದುಡಿಯುತ್ತಿರುವ ನೌಕರರಿಗೆ ಕಾನೂನು ಬದ್ಧ ಸೌಲಭ್ಯಗಳಾದ ಪಿಎಫ್, ಇಎಸ್‌ಐ ಮೊದಲಾದ ಸೌಲಭ್ಯಗಳಿಲ್ಲದ ಬಹುತೇಕರು ದಿನಗೂಲಿ ನೌಕರರಾಗಿದ್ದಾರೆ.
ಇವರಿಗೆ ಲಾಕ್‌ಡೌನ್‌ನ ಇಂದಿನ ಪರಿಸ್ಥಿತಿಯಲ್ಲಿ ಮಾಲಕರು ಯಾವುದೇ ಪರಿಹಾರ ನೀಡುತ್ತಿಲ್ಲ. ಬೇರೆ ಯಾವುದೇ ಆದಾಯ ಇಲ್ಲದ ಇವರ ಬಹುತೇಕ ಕುಟುಂಬಗಳು ಬಾಡಿಗೆ ಮನೆಯಲ್ಲಿದ್ದು ಸಂಕಷ್ಟದಲ್ಲಿವೆ.ಜಿಲ್ಲೆಯಲ್ಲಿರುವ ಬೀಡಿ, ಗೇರುಬೀಜ ಕಾರ್ಖಾನೆ ಕಾರ್ಮಿಕರು, ಕೆಲವು ಸಣ್ಣ ಕೈಗಾರಿಕೆಯಲ್ಲಿ ದುಡಿಯುತ್ತಿರುವ ಕಾರ್ಮಿಕರ ಪರಿಸ್ಥಿತಿಯೂ ಭಿನ್ನವಾಗಿಲ್ಲ ಆದ್ದರಿಂದ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ತಲಾ 5000ರೂ.ನಂತೆ ಪ್ಯಾಕೇಜ್ ವಿಸ್ತರಿಸಿ ನೆರವು ಘೋಷಿಸಬೇಕೆಂದು ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಶಂಕರ್ ಹಾಗೂ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮನವಿಯಲ್ಲಿ ಒತ್ತಾಯಿಸಿದ್ದಾರೆ.







