ರೆಡ್‌ಕ್ರಾಸ್‌ನಿಂದ 111 ಮಂದಿ ವಿಕಲಚೇತನರಿಗೆ ಕಿಟ್ ವಿತರಣೆ

ಉಡುಪಿ, ಮೇ 8: ರೆಡ್‌ಕ್ರಾಸ್ ದಿನಾಚರಣೆ ಅಂಗವಾಗಿ, ಉಡುಪಿ ರೆಡ್ ಕ್ರಾಸ್ ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ 111 ಮಂದಿ ವಿಕಲಚೇತನರಿಗೆ ದಿನಸಿಗಳ ಕಿಟ್ ಮತ್ತು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಗೆ ಅಗತ್ಯವಿದ್ದ 3 ತಿಂಗಳ ಅವಧಿಯ ಔಷಧಗಳು ಹಾಗೂ ಫ್ಯಾಮಿಲಿ ಪ್ಲಾನಿಂಗ್ ಆಫ್ ಇಂಡಿಯಾ ಸಂಸ್ಥೆಗೆ 50,000ರೂ. ಮೌಲ್ಯದ ಔಷಧಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ, ಜಿಲ್ಲಾ ವಿಕಲಚೇತನ ಸಬಲೀಕರಣ ಅಧಿಕಾರಿ ಚಂದ್ರಾನಾಯ್ಕ್, ವಿಕಲಚೇತನರಿಗೆ ಅನುಕಂಪದ ಬದಲು ಅವಕಾಶಗಳನ್ನು ನೀಡುವಂತೆ ತಿಳಿಸಿದರು. ಜಿಲ್ಲೆಯಲ್ಲಿರುವ 111 ಮಂದಿ ಅತ್ಯಂತ ಬಡವರಾದ, ಹಾಸಿಗೆ ಹಿಡಿದಿರುವ ವಿಕಲಚೇತನರನ್ನು ಗುರುತಿಸಿ ದಿನಸಿ ಕಿಟ್‌ಗಳನ್ನು ವಿತರಿಸಿರುವ ರೆಡ್‌ಕ್ರಾಸ್‌ನ ಈ ಸಮಾಜಮುಖಿ ಸೇವೆ ಇದೇ ರೀತಿ ಮುಂದುವರಿಯಲಿ ಎಂದು ಹಾರೈಸಿದರು.
ಉಡುಪಿ ರೆಡ್‌ಕ್ರಾಸ್ ಘಟಕದ ಅಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥಾಪಕ ಸರ್ ಜೀನ್ ಹೆನ್ರಿ ಡ್ಯುನಾಂಟ್, ಮನುಕುಲದ ಒಳಿತಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟು ಕಾರ್ಯ ನಿರ್ವಹಿಸಿದ್ದು, ಅವರ ತತ್ವ,ಆದರ್ಶಗಳ ಹಾದಿಯಲ್ಲೇ ರೆಡ್‌ಕ್ರಾಸ್ ಈಲೂ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರೆಡ್‌ಕ್ರಾಸ್‌ನ ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೆ. ಮತ್ತು ಆಡಳಿತ ಮಂಡಳಿ ಸದಸ್ಯರಾದ ಡಾ. ಕೆ.ಕೆ. ಕಲ್ಕೂರ, ಸಿ.ಎಸ್ ರಾವ್, ಅಶೋಕ್ ಹೆಗ್ಡೆ, ಡಾ. ಸುರೇಶ್ ಶೆಣೈ, ಕೆ. ಸನ್ಮತ್ ಹೆಗ್ಡೆ, ಜಯರಾಮ್ ಆಚಾರ್ಯ, ಇಂದಿರಾ ಹೆಗ್ಡೆ, ರಮಾದೇವಿ, ಮುಹಮ್ಮದ್ ಮೌಲ ಮತ್ತು ಕೋವಿಡ್-19 ವಾರಿಯಸ್ಸ್‌ಗಳು ಪಾಲ್ಗೊಂಡಿದ್ದರು.
ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ಸ್ವಾಗತಿಸಿದರು. ಗೌರವ ಖಚಾಂಚಿ ಟಿ. ಚಂದ್ರಶೇಖರ್ ವಂದಿಸಿ, ಜಯರಾಮ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.








